ಕನ್ನಡ ವಾರ್ತೆಗಳು

ಕುಂದಾಪುರದ ಮೂರು ಹಳೆ ಮರ್ಡರ್ ಕೇಸುಗಳ ತನಿಖೆಗೆ ಕಾರ್ಕಳ ಎಎಸ್ಪಿ ಡಾ.ಸುಮನ್ ನೇಮಕ; ಗಂಗೊಳ್ಳಿಯಲ್ಲಿ ಎಸ್ಪಿ ಹೇಳಿಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಹೃದಯ ಭಾಗದಲ್ಲೇ ಆರು ವರ್ಷಗಳ ಹಿಂದೆ ನಡೆದ ಉದ್ಯಮಿ ಸುಬ್ರಾಯ ಹೊನ್ನಾವರ್ ಶೂಟೌಟ್ ಪ್ರಕರಣ ಸೇರಿದಂತೆ, ಬೆಳ್ವೆ ಸಮೀಪದ ಅಲ್ಬಾಡಿಯಲ್ಲಿ ನಡೆದ ಉದಯ ಶೆಟ್ಟಿ ಕೊಲೆ, ಹಂಗ್ಳೂರು ಕುಸುಮಾ ಕೊಲೆಯ ಕಡತಗಳಿಗೆ ಇದೀಗಾ ಮರುಜೀವ ಬಂದಿದೆ. ಕುಂದಾಪುರದ ಈ ಮೂರು ಕೊಲೆ ಪ್ರಕರಣಗಳ ತನಿಖೆಯನ್ನು ದಕ್ಷ ಅಧಿಕಾರಿ ಕಾರ್ಕಳ ಎ.ಎಸ್.ಪಿ. ಡಾ. ಸುಮನ್ ಡಿ.ಪಿ. ಅವರಿಗೆ ವಹಿಸಲಾಗಿದೆ.

Kundapura_ Murder case_Re investigation

(ಕೊಲೆಯಾದ ಉದಯಶೆಟ್ಟಿ, ಸುಬ್ರಾಯ್ ಹೊನ್ನಾವರ್, ಕುಸುಮಾ)

ಪಶ್ಚಿಮ ವಲಯ ಐಜಿಪಿ ಅಮೃತಪಾಲ್ ಅವರು ಅ.17ರಂದು ಕುಂದಾಪುರ ಠಾಣೆಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರು ಈ ಮೂರು ಪ್ರಕರಣಗಳನ್ನೊಳಗೊಂಡಂತೆ ಬಗೆಹರಿಯದ ಕೊಲೆ ಪ್ರಕರಣಗಳ ತನಿಖೆಯ ಕುರಿತು ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಅವರು ಈ ಬಗ್ಗೆ ಎಸ್ಪಿ ಅಣ್ಣಾಮಲೈ ಅವರಿಗೆ ಬಗೆಹರಿಯದ ಕೊಲೆ ಕೇಸುಗಳ ಮರುತನಿಖೆ ನಡೇಸುವಂತೆ ಆದೇಶವನ್ನು ನೀಡಿದ್ದರು.

Karkala_ASP_Dr Suman

(ಕಾರ್ಕಳ ಎಎಸ್ಪಿ (A.S.P.) ಡಾ. ಸುಮನ್ ಡಿ.ಪಿ)

ಈ ಹಿನ್ನೆಲೆಯಲ್ಲಿ ಐಜಿಪಿ ಅವರ ಆದೇಶದಂತೆ ಕುಂದಾಪುರದಲ್ಲಿ ನಡೆದ ಸುಬ್ರಾಯ ಹೊನ್ನಾವರ್ಕರ್ ಶೂಟೌಟ್, ಬೆಳ್ವೆ ಗ್ರಾ,ಪಂ. ಸದಸ್ಯ ಉದಯ ಶೆಟ್ಟಿ ಮರ್ಡರ್ ಹಾಗೂ ಕುಂದಾಪುರ ಕುಸುಮಾ ಕೊಲೆ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಆದೇಶಿಸಿದ್ದಲ್ಲದೇ ಕಾರ್ಕಳ ಎ.ಎಸ್.ಪಿ. ಡಾ. ಸುಮನ್ ಅವರಿಗೆ ತನಿಖೆಯನ್ನು ವಹಿಸಲಾಗಿದೆ. ತನಿಖಾಧಿಕಾರಿಯಾಗಿರುವ ಡಾ. ಸುಮನ್ ಅವರು ಈಗಾಗಲೇ ಪ್ರಕರಣಗಳ ಕುರಿತು ಮಾಹಿತಿಯನ್ನು ಪಡೆದಿದ್ದು ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೇಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕುಂದಾಪುರದ ಗಂಗೊಳ್ಳಿಯಲ್ಲಿ ‘ಕನ್ನಡಿಗ ವರ್ಲ್ಡ್’ಗೆ ಪ್ರತಿಕ್ರಿಯಿಸಿದ ಅವರು, ಐಜಿಪಿ ಅವರ ಆದೇಶದಂತೆ ಮೂರು ಕೊಲೆ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಿದ್ದೇವೆ. ಕುಂದಾಪುರ ಉಪವಿಭಾಗವನ್ನು ಬಿಟ್ಟು ಹೊರಗಿನ ಅಧಿಕಾರಿಗಳಿಗೆ ಪ್ರಕರಣದ ಜವಬ್ದಾರಿ ನೀಡಿದ್ದು ಕಾರ್ಕಳ ಎ.ಎಸ್.ಪಿ. ಡಾ. ಸುಮನ್ ಅವರ ನೇತೃತ್ವದಲ್ಲಿ ಶೀಘ್ರವೇ ತನಿಖೆ ಆರಂಭಗೊಳ್ಳಲಿದೆ. ಮೂರು ಪ್ರಕರಣಗಳನ್ನು ಅವರೇ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದರು.

IGP_Amrathpal_Kndpr-1 Udupi_Sp_Annamalai

ಏಳು ವರ್ಷಗಳ ಹಿಂದಿನ ಉದಯ ಶೆಟ್ಟಿ ಕೊಲೆ, ಆರು ವರ್ಷಗಳ ಹಿಂದಿನ ಶೂಟೌಟ್ ಪ್ರಕರಣ ಹಾಗೂ ನಾಲ್ಕು ವರ್ಷಗಳ ಹಿಂದಿನ ಮಹಿಳೆ ಕೊಲೆ ಕಡತ ಮರುಜೀವ ಪಡೆಯುತ್ತಿದ್ದು ಮನೆಯವರನು ಕಳೆದುಕೊಂಡ ಕುಟುಂಬಿಕರಿಗೆ ನ್ಯಾಯ ಸಿಗುವ ಆಸೆಯಿದೆ. ಉದಯ ಶೆಟ್ಟಿ ಹಾಗೂ ಕುಸುಮಾ ಕೊಲೆ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಉಹಾಪೋಹದ ಮಾತುಗಳು ಹಾಗೂ ಆರೋಪಿಗಳ ಬಗ್ಗೆಯೂ ಗಾಳಿಸುದ್ದಿಗಳು ಕೇಳಿಬರುತ್ತಿದೆಯಾದರೂ ಯಾರೂ ಧೈರ್ಯವಾಗಿ ಪೊಲೀಸರ ಎದುರು ಇದನ್ನು ಹೇಳುತ್ತಿಲ್ಲ. ಉದಯ ಶೆಟ್ಟಿ ಕೊಲೆ ಹಾಗೂ ಕುಸುಮಾ ಕೊಲೆ ಪ್ರಕರಣದ ರಹಸ್ಯ ಬಯಲುಮಾಡುವುದು ಹೆಚ್ಚೇನೂ ಕಷ್ಟವೂ ಅಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಒಟ್ಟಿನಲ್ಲಿ ದಕ್ಷ ಅಧಿಕಾರಿ ಡಾ. ಸುಮನ್ ಅವರು ಕೇಸನ್ನು ಕೈಗೆತ್ತಿಕೊಂಡ ಬಳಿಕ ಈ ಕೊಲೆ ಪ್ರಕರಣದ ಬಗೆಗ್ಗಿನ ಸತ್ಯಾಸತ್ಯತೆಗಳನ್ನು ಬಯಲಿಗೆಳೆದು ಆರೋಪಿಗಳನ್ನು ಪತ್ತೆ ಹಚ್ಚಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರೆಯೇ ಎಂಬುದು ಕಾದುನೋಡಬೇಕಿದೆ.

Write A Comment