ಕನ್ನಡ ವಾರ್ತೆಗಳು

ಪಣಂಬೂರು ಸಮುದ್ರ ಕಿನಾರೆಯಲ್ಲಿ ಕಾನೂನು ಉಲ್ಲಂಘಿಸಿ ಕಾಟೇಜ್, ಬಾರ್ ನಿರ್ಮಾಣ : ಆರೋಪ

Pinterest LinkedIn Tumblr

Panambur_Beach_resort_

ಮಂಗಳೂರು, ಡಿ.11: ಪಣಂಬೂರು ಸಮುದ್ರ ಕಿನಾರೆಯಲ್ಲಿ ಕಾಟೇಜ್, ಬಾರ್ ವ್ಯವಸ್ಥೆಯನ್ನೊಳಗೊಂಡ ರೆಸಾರ್ಟ್‌ವೊಂದು ತಲೆ ಎತ್ತುತ್ತಿದ್ದು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಇದನ್ನು ನಿರ್ಮಿಸುತ್ತಿದ್ದಾರೆ. ಈ ನಡುವೆ ಸಿಆರ್‌ಝೆಡ್ ಕಾನೂನನ್ನು ಗಾಳಿಗೆ ತೂರಿ ಈ ರೆಸಾರ್ಟ್ ನಿರ್ಮಾಣವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಮುದ್ರ ತೀರದಲ್ಲಿ ಸಿಆರ್‌ಝೆಡ್ ಕಾನೂನು ಪ್ರಕಾರ ಯಾವುದೇ ಶಾಶ್ವತ ಕಾಮಗಾರಿ ನಡೆಸಲು ಅವಕಾಶವಿಲ್ಲ. ಈ ಕಾನೂನು ಸಿಆರ್‌ಝೆಡ್ ಪ್ರದೇಶದಲ್ಲಿ ಸ್ವಂತ ಭೂಮಿ ಹೊಂದಿರುವವರು ಮನೆ ಕಟ್ಟಲು ಅಥವಾ ಹಳೆ ಮನೆ ನವೀಕರಣ ಸಂದರ್ಭ ತೊಡಕಾಗಿ ಕಾಡುವುದು ಸಾಮಾನ್ಯ. ಈ ಪ್ರದೇಶ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿರುವ ಹಲವರಿಗೆ ಸಿಆರ್‌ಝೆಡ್ ಕಾನೂನು ಕಾರಣ ಇನ್ನೂ ಮನೆ ನಂಬ್ರ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಪಣಂಬೂರು ಸಮುದ್ರ ಕಿನಾರೆಯಲ್ಲಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗೆ ಈ ಯಾವ ಸಮಸ್ಯೆಗಳೂ ಬಾಧಿಸಿದಂತೆ ಕಾಣುತ್ತಿಲ್ಲ. ಈ ರೆಸಾರ್ಟ್‌ನಲ್ಲಿ ಬಾರ್ ಹಾಗೂ ಪ್ರವಾಸಿಗಳಿಗೆ ತಂಗಲು ಅಗತ್ಯವಿರುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅತ್ಯಾಧುನಿಕ ರೆಸಾರ್ಟ್ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.ಮನೆ ನವೀಕರಣ ಅಥವಾ ಸಣ್ಣ ಮನೆ ನಿರ್ಮಿಸಲು ಸಿಗದೆ ಇರುವಂತಹ ಅನುಮತಿ ಈ ವಿಲಾಸಿ ರೆಸಾರ್ಟ್ ನಿರ್ಮಾಣಕ್ಕೆ ಹೇಗೆ ಲಭಿಸಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ರೆಸಾರ್ಟ್ ನಿರ್ಮಾಣ ಸಿಆರ್‌ಝೆಡ್ ಕಾನೂನನ್ನು ಉಲ್ಲಂಘಿಸಿ ಮಾಡಲಾಗಿದೆ ಎಂದು ಡಿವೈಎಫ್‌ಐ ಆರೋಪಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವೌಖಿಕ ದೂರು ನೀಡಿರುವುದಾಗಿ ಸಂಘಟನೆ ತಿಳಿಸಿದೆ. ಇದೇ ವೇಳೆ ರೆಸಾರ್ಟ್ ಸ್ಥಳಕ್ಕೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾನೂನು ಉಲ್ಲಂಘನೆ ಬಗ್ಗೆ ಪರಿಶೀಲನೆ : ಡಿ.ಸಿ

ಪಣಂಬೂರು ಬೀಚ್‌ನಲ್ಲಿ ನಿರ್ಮಾ ಣವಾಗುತ್ತಿರುವ ರೆಸಾರ್ಟ್‌ನ್ನು ಪರಿಶೀಲಿಸಿದ್ದೇನೆ. ಇದನ್ನು ಸಿಆರ್‌ಝೆಡ್ ಕಾನೂನನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂಬ ಬಗ್ಗೆ ಯಾವುದೇ ದೂರುಗಳು ಇದು ವರೆಗೆ ಬಂದಿಲ್ಲ. ಆದರೂ ಇದರ ನಿರ್ಮಾಣದಲ್ಲಿ ಸಿಆರ್‌ಝೆಡ್ ಉಲ್ಲಂಘನೆ ಆಗಿದೆಯೋ ಎಂಬ ಬಗ್ಗೆ ಇಲಾಖಾ ವರದಿ ತರಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಕಾನೂನು ಗಾಳಿಗೆ ತೂರಿ ರೆಸಾರ್ಟ್ ನಿರ್ಮಾಣ : ಮುನೀರ್ ಆರೋಪ

ಸಮುದ್ರ ತೀರದಲ್ಲಿ ಸಿಆರ್‌ಝೆಡ್ ಕಾನೂನು ಪ್ರಕಾರ ಯಾವುದೇ ಶಾಶ್ವತ ಕಾಮಗಾರಿಗಳನ್ನು ನಡೆಸಲು ಅವಕಾಶ ಇಲ್ಲ. ಸಮುದ್ರ ತೀರದಲ್ಲಿ ಬಡವರಿಗೆ ಬರೀ ಮನೆ ಕಟ್ಟಲು ಅವಕಾಶವಿಲ್ಲದಿರುವಾಗ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ದೊರೆತಿರುವುದು ಅಚ್ಚರಿಯ ವಿಷಯ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ರೈ ಕಾನೂನನ್ನು ಗಾಳಿಗೆ ತೂರಿ ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ಇದಕ್ಕೆ ಇಲಾಖೆಗಳು ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಈ ಬಗ್ಗೆ ಡಿವೈಎಫ್‌ಐ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಲಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ವರದಿ ಕೃಪೆ : ವಾಭಾ

Write A Comment