ಕನ್ನಡ ವಾರ್ತೆಗಳು

ಅಕ್ರಮಕ್ಕೆ ಬ್ರೇಕ್ ಹಾಕಿದ ದಕ್ಷ ಎಸ್ಪಿ ಕೆ. ಅಣ್ಣಾಮಲೈ ವರ್ಗಾವಣೆಗೆ ‘ಕಾಣದ’ ಕೈಗಳ ಕಸರತ್ತು?

Pinterest LinkedIn Tumblr

Sp. K, annamalai - Copy

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ ಸಮಾಜಘಾತುಕರಿಗೆ ಬಿಸಿ ಮುಟ್ಟಿಸಿದ, ಸಾಮಾನ್ಯ ಜನರ ಪಾಲಿನ ಆಶಾಕಿರಣರಾಗಿ, ಯುವಕರಿಗೆ ರೋಲ್ ಮಾಡೆಲ್ ಆಗಿ, ಪೊಲೀಸ್ ಎಂದರೇ ಹೀಗಿರಬೇಕೆಂದು ಜನರು ಮೆಚ್ಚುವ ಹಾಗೆ ಕಾರ್ಯದಕ್ಷತೆ ಮೆರೆದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ (ಐಪಿಎಸ್) ಅವರ ವರ್ಗಾವಣೆಗಾಗಿ ಕೆಲವು ಹಿತಾಸಕ್ತಿಗಳು ಕಸರತ್ತು ಮಾಡುತ್ತಿದೆ ಎಂಬ ಬಗೆಗಿನ ವಿಚಾರವೀಗ ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲ ದಿನಗಳಿಂದ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆ ಬಗ್ಗೆ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದೆ.

ದಂಧೆಕೋರರಿಗೆ ಸಿಂಹಸ್ವಪ್ನ:
ಹೌದು… ಕಾನೂನು ಸುವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಿ ಜನಸಮಾನ್ಯರು ತಮ್ಮ ದುಃಖ ದುಮ್ಮಾನ್ನಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಿಕೊಳ್ಳುವಂತೆ ಮಾಡಿದ ಇವರು ಸಮಾಜಘಾತುಕರ ಪಾಲಿಗೆ ಸಿಂಹಸ್ವಪ್ನರಾಗಿದ್ದವರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವಲ್ಲಿ ಖಡಕ್ ಎಸ್ಪಿ ಎಂದೇ ಜನಜನಿತರಾಗಿದ್ದಾರೆ. ರಾಜಕೀಯ ಸೇರಿದಂತೆ ಯಾವುದೇ ಪ್ರಭಾವಿ ವ್ಯಕ್ತಿಗಳ ಪ್ರಭಾವ ಹಾಗೂ ಒತ್ತಡಕ್ಕೂ ಮಣಿಯದ ಅಣ್ಣಾಮಲೈ ಅವರು ಅಕ್ರಮ ಚಟುವಟಿಕೆಗಳ ಹಾಗೂ ದಂಧೆಕೋರರ ಕೆಂಗಣ್ಣಿಗೆ ಗುರಿಯಾಗಿ ಹಲವು ಬಾರೀ ವರ್ಗಾವಣೆಯ ಸಂಚಿಗೆ ತನ್ನ ಕಾರ್ಯವೈಖರಿಯ ಮೂಲಕವೇ ಉತ್ತರ ನೀಡಿದ್ದರು.

ಡಿಸೆಂಬರ್ ಅಂತ್ಯದಲ್ಲಿ ವರ್ಗ?
ಕಾರ್ಕಳ ಉಪವಿಭಾಗದ ಎ.ಎಸ್ಪಿ ಆಗಿದ್ದ ಕೆ. ಅಣ್ಣಾಮಲೈ ಅವರು ಕಳೆದ ವರ್ಷ ಜನವರಿ ಒಂದನೆಯ ತಾರಿಖಿನಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೂಲಗಳ ಪ್ರಕಾರ ಹಾಗೂ ಜಾಲತಾಣಗಳಲ್ಲಿ ಹರಿಯುತ್ತಿರುವ ಸುದ್ದಿಗಳ ಪ್ರಕಾರ ಇದೇ ಡಿಸೆಂಬರ್ ಅಂತ್ಯದೊಳಗೆ ಎಸ್ಪಿ ಅವರನ್ನು ಬೇರೆಡೆಗೆ ವರ್ಗಾಯಿಸಿ ಇವರ ಸ್ಥಾನಕ್ಕೆ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿ ಡಿವೈಎಸ್ಪಿ ಆಗಿದ್ದ ದಿಲೀಪ್ ಅವರನ್ನು ಕೂರಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರಲ್ಲಿ ಕೆಲವು ರಾಜಕೀಯ ವ್ಯಕಿಗಳ ಕೈವಾಡವೂ ಇದೆಯೆಂಬ ಬಗ್ಗೆ ವದಂತಿಯಿದ್ದು ಖಾವಿದಾರಿಯೊಬ್ಬರು ವರ್ಗದ ವಿಚಾರದಲ್ಲಿ ಕೈಯಾಡಿಸುತ್ತಿದ್ದಾರೆಂದು ಜಿಲ್ಲೆಯ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

ಅಕ್ರಮಕ್ಕೆ ಬಿದ್ದಿತ್ತು ಬ್ರೇಕ್:
ಉಡುಪಿ ಜಿಲ್ಲೆಯಲ್ಲಿ ವಿಪರೀತವಾಗಿ ನಡೆಯುತ್ತಿದ್ದ ಮಟ್ಕಾ ದಂಧೆಯ ಕಡಿವಾಣಕ್ಕೆ ಎಸ್ಪಿ ಅವರು ಅವಿರತ ಶ್ರಮಿಸಿದ್ದರು, ಇನ್ನು ಮಣಿಪಾಲ ಭಾಗದಲ್ಲಿ ನಡೆಯುತ್ತಿದ್ದ ಮಸಾಜ್ ಪಾರ್ಲರ್, ಕೆಲವು ಸ್ಥಳಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಸಂಪೂರ್ಣ ಕಡಿವಾಣ ಹಾಕುವ ಮೂಲಕ ದಂಧೆಗಳಿಗೆ ಬ್ರೇಕ್ ಹಾಕಿದ್ದರು. ಕುಂದಾಪುರ ಭಾಗದಲ್ಲಿ ನಿತ್ಯ ನಡೇಯುತ್ತಿದ್ದ ಗರ್ ಗರ್ ಮಂಡಲ, ಇಸ್ಪೀಟ್ ಮೊದಲಾದ ಜೂಜು-ಜುಗಾರಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿ ಇಂತಹ ಚಟುವಟಿಕೆ ನಡೆಸುವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದರು. ಇನ್ನು ರಾತ್ರಿ ವೇಳೆ ಹಗೂ ಬೆಳಿಗ್ಗೆ ಅನಿರ್ಧಿಷ್ಟ ಸಮಯದಲ್ಲಿ ಬಾರುಗಳಲ್ಲಿ ಮದ್ಯ ಮಾರಾಟ, ಗೂಡಂಗಡಿಗಳಲ್ಲಿ ಮದ್ಯ ಮಾರಾಟ, ಗಾಂಜಾ ದಂಧೆಗಳಿಗೂ ಬ್ರೇಕ್ ಹಾಕಿಸಿದ್ದರು. ಬಹಳ ಪ್ರಮುಖವಾಗಿ ಟ್ರಾಫಿಕ್ ಸುವ್ಯವಸ್ಥೆ ಬಗ್ಗೆ ತನ್ನದೇ ಆದ ಸಮರ್ಪಕ ಉಪಾಯಗಳು ಎಸ್ಪಿ ಅವರಲ್ಲಿದ್ದಿದ್ದು ಮಣಿಪಾಲ, ಉಡುಪಿ ಕುಂದಾಪುರ ಸೇರಿದಂತೆ ಟ್ರಾಫಿಕ್ ಸುವ್ಯವಸ್ಥೆಗೆ ಸೂಕ್ತ ಕ್ರಮಕೈಗೊಂಡಿದ್ದರು. ವಿದ್ಯಾರ್ಥಿಗಳಿಗೆ ಹೆಲ್ಮೇಟ್ ಕಡ್ಡಾಯಗೊಳಿಸಿ ಅವರ ಸುರಕ್ಷತೆ ಬಗ್ಗೆ ಆಳವಾದ ಆಲೋಚನೆ ನಡೆಸಿದ್ದು ಎಸ್ಪಿ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು.

ವರ್ಷದ ಸಾಧನೆಯ ಹಾದಿ:
ಉಡುಪಿ ಜಿಲ್ಲೆ ಹಾಗೂ ಕುಂದಾಪುರ ಭಾಗದಲ್ಲಿ ನಡೆದ ಹಲವು ಕೇಸುಗಳ ಪತ್ತೆಕಾರ್ಯದಲ್ಲಿ ಎಸ್ಪಿ ಅಣ್ಣಾಮಲೈ ಅವರ ಕಾರ್ಯದಕ್ಷತೆ ಪ್ರಮುಖವಾಗಿತ್ತು. ಮೊಬೈಲ್ ಅಂಗಡಿಗಳ ಸರಣಿಕಳ್ಳತನ ಎಸಗಿದ ಆರೋಪಿಗಳನ್ನು ಲಕ್ಷಾಂತರ ಸೊತ್ತು ಸಹಿತ ಬಂಧಿಸಿದ್ದು, ಬೈಂದೂರು ಅಕ್ಷತಾ ದೇವಾಡಿಗ ಕೊಲೆ ಪ್ರಕರಣದ ಆರೋಪಿಗಳನ್ನು ಮೂರು ದಿನಗಳಲ್ಲಿ ಬಂಧಿಸಿದ್ದು, ಮೊನ್ನೆಯಷ್ಟೆ ಬೆಳ್ವೆಯಲ್ಲಿ ನಡೆದ ಉಷಾ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಎರಡು ದಿನಗಳಲ್ಲಿ ಬಂಧಿಸಿದ್ದು, ಉಡುಪಿ ಜಿಲ್ಲೆಯ ಹಲವೆಡೆ ದೇವಾಲಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸೊತ್ತು ಸಮೇತ ಬಂಧಿಸಿದ್ದು ಪ್ರಮುಖವಾಗಿದೆ. ಇನ್ನು ಗಾಂಜಾ, ಅಕ್ರಮ ಮದ್ಯ, ಜುಗಾರಿ, ಜೂಜು, ವೈಶ್ಯಾವಾಟಿಕೆ, ವಂಚನೆ ಮೊದಲಾದ ಹಲವು ಪ್ರಕರಣಗಳ ಆರೋಪಿಗಳನ್ನು ಪತ್ತೆಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರ ಹೆಗ್ಗಳಿಗೆ ಪಾತ್ರರಾಗಿದ್ದು, ಅತ್ಯುತ್ತಮ ಪೊಲೀಸ್ ವೆಬ್ ಸೈಟ್, ಸುರಕ್ಷಾ ಆಪ್ ನಿರ್ಮಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಿದ್ದಾರೆ.

ವರ್ಗ ಮಾಡಿದ್ರೇ ಸಾರ್ವಜನಿಕರ ಹೋರಾಟ?
ಉಡುಪಿ ಎಸ್ಪಿ ಅವರ ವರ್ಗಾವಣೆ ಬಗ್ಗೆ ಜಾಲತಾಣಗಳಲ್ಲಿ ಮಾಹಿತಿಗಳು ರವಾನೆಯಾಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಬಹುತೇಕ ಚರ್ಚೆಗಳು ನಡೆಯುತ್ತಿದೆ. ಎಸ್ಪಿ ಅವರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಲೇಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘಟನೆಗಳಿಂದ ಕೇಳಿಬರುತ್ತಿದೆ. ಒಂದೊಮ್ಮೆ ವರ್ಗಾವಣೆ ಖಚಿತವೇ ಹೌದಾದರೇ ಹೋರಾಟದ ಹಾದಿ ಹಿಡಿಯಲು ಚಿಂತನೆಗಳು ನಡೆಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಎಸ್ಪಿ ಅವರನ್ನು ವರ್ಗಾಯಿಸುವಾಗ ಬ್ರಹತ್ ಹೋರಾಟ, ಬಂದ್ ಮೊದಲಾದವುಗಳನ್ನು ನಡೆಸಿ ಜಿಲ್ಲೆಯ ವರಿಷ್ಠಾಧಿಕಾರಿಗಳ ಬಗ್ಗೆ ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ನಿದರ್ಶನಗಳು ಇದೆ. ಇದೇ ಮಾದರಿಯಲ್ಲಿ ಉಡುಪಿಯಲ್ಲಿ ಹೋರಾಟ ನಡೆದರೂ ಅಚ್ಚರಿಯೂ ಇಲ್ಲ.

ಒಟ್ಟಿನಲ್ಲಿ ದಕ್ಷ ಹಾಗೂ ಖಡಕ್ ಅಧಿಕಾರಿ ಕೆ. ಅಣ್ಣಾಮಲೈ ಅವರ ವರ್ಗಾವಣೆ ವಿಚಾರ ಸದ್ಯ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ. ಎಲ್ಲರ ಅಭಿಪ್ರಾಯ,ಅಭಿಮತ ಹಾಗೂ ಒಕ್ಕೋರಲ ಧ್ವನಿ ‘ಅಣ್ಣಾಮಲೈ ಅವರ ವರ್ಗ ಬೇಡ’ ಎಂಬುದಾಗಿದೆ.

ವರದಿ- ಯೋಗೀಶ್ ಕುಂಭಾಸಿ

Write A Comment