ಕುಂದಾಪುರ: ತಾಲೂಕಿನ ಕಟ್‌ಬೆಲ್ತೂರ್ ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಲಾದ ಕೋಟಿಗಟ್ಟಲೇ ಅಂದಾಜು ವೆಚ್ಚದ ಮೀನುಸಂಸ್ಕರಣಾ ಘಟಕದ ಕಟ್ಟಡಕ್ಕೆ ಪರವಾನಿಗೆ ನೀಡಿದ ಗ್ರಾಮಪಂಚಾಯತ್ ವರ್ತನೆಯ ಕುರಿತು ಗ್ರಾಮಸ್ಥರು ಆಕ್ರೋಷಗೊಂಡಿದ್ದು ಸೋಮವಾರ ಬೆಳಿಗ್ಗೆ ಕಟ್‌ಬೆಲ್ತೂರ್ ಪಂಚಾಯತ್ ಎದುರು ಬ್ರಹತ್ ಪ್ರತಿಭಟನೆ ನಡೆಸಿದರು.
ವ್ಯಕ್ತಿಯೋರ್ವರು ಅಂದಾಜು 25 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಮೀನು ಸಂಸ್ಕರಣಾ ಘಟಕದ ಕಟ್ಟಡಕ್ಕೆ ಪಂಚಾಯ್ತ್ ಪರವಾನಿಗೆ ನೀಡಿತ್ತು. ಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಗ್ರಾಮದ ಸರ್ವೇ ನಂಬ್ರ 174/12 ಹಾಗೂ 174/11ನಲ್ಲಿ ಕೈಗಾರಿಕಾ ಕಟ್ಟಡ ನಿರ್ಮಾಣಕ್ಕೆ ನೀಡಿದ ಅನುಮತಿಯನ್ನು ಪಂಚಾಯತ್ ಕೂಡಲೇ ರದ್ದುಗೊಳಿಸಬೇಕು ಅಲ್ಲದೇ ಮುಂದಿನ ದಿನಗಳಲ್ಲಿ ಕೈಗಾರಿಕಾ ನೀಡಲು ಯಾವುದೇ ಪರವಾನಿಗೆಯನ್ನು ನೀಡಬಾರದು ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದರು. ಅಲ್ಲದೇ ಅನುಮತಿಗೆ ಸಹಕರಿಸಿದ ಗ್ರಾಮಪಂಚಾಯತ್ ಅಭಿವ್ರದ್ಧಿ ಅಧಿಕಾರಿಯ ವಿರುದ್ಧ ಆಕ್ರೋಷ ವ್ಯಕ್ತವಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿರೈತಮೋರ್ಚ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ ಅವರು, ಜನವಸತಿ ಪ್ರದೇಶದಲ್ಲಿ ಈ ಕೈಗಾರಿಕೆ ಘಟಕ ಆರಂಭಿಸಿದ್ದು ಈ ಘಟಕದಿಂದ ಹರಿದುಬರುವ ತ್ಯಾಜ್ಯಗಳಿಂದ ಪರಿಸರ ಮಾಲೀನ್ಯ ಜಲಮಾಲಿನ್ಯ ಸಂಭವಿಸಿ ಸಾರ್ವಜನಿಕ ಜೀವನಕ್ಕೆ ಸಮಸ್ಯೆಯಾಗುತ್ತದೆ. ಇಂತಹಾ ಬ್ರಹತ್ ಕೈಗಾರಿಕೆ ಕಟ್ಟಡ ನಿರ್ಮಾಣಕ್ಕೂ ಮೊದಲು ಜನಭಿಪ್ರಾಯ ಸಂಗ್ರಹ ಮಾಡಬೇಕಿತ್ತು. ಅಲ್ಲದೇ ಈ ಬಗ್ಗೆ ವಿಶೇಷ ಗ್ರಾಮಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಬಳಿಕ ಪರವಾನಿಗೆ ನೀಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಗ್ರಾಮಪಂಚಾಯತ್ ಏಕಾಏಕಿ ಕಟ್ಟಡ ಪರವಾನಿಗೆ ನೀಡುವ ಮೂಲಕ ಜನರಿಗೆ ಅನ್ಯಾಯ ಮಾಡಿದೆ. ಅದ್ದರಿಂದ ಘಟಕದ ಕಟ್ಟಡಕ್ಕೆ ನೀಡಿದ ಅನುಮತಿಯನ್ನು ರದ್ಧುಪಡಿಸಬೇಕು ಅಲ್ಲದೇ ಘಟಕ ಪ್ರಾರಂಭಿಸಲು ಮುಂದಿನ ದಿನಗಳಲ್ಲಿ ಯಾವುದೇ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು. ಜನರಿಗೆ ಅನ್ಯಾಯವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿಯೂ ಹೋರಾಟ ನಡೆಸಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಹರೀಶ್ ಕುಮಾರ್ ಶೆಟ್ಟಿ ದೇವಲ್ಕುಂದ, ಸೋಮಶೇಖರ್ ಶೆಟ್ಟಿ ಕೋಕನಾಡಿ, ಚಂದ್ರ ನಾಯ್ಕ್, ಗ್ರಾಮಪಂಚಾಯತ್ ಸದಸ್ಯರಾದ ಚಂದ್ರ ಭಟ್, ರಾಮ ಶೆಟ್ಟಿ, ಶೋಭಾ, ಅಂಬಿಕಾ ಮೊದಲಾದವರಿದ್ದರು.
ಪ್ರತಿಭಟನಕಾರರು ಕಟ್ ಬೆಲ್ತೂರು ಪಿ.ಡಿ.ಓ. ರೂಪಾ ಅವರಿಗೆ ಮನವಿ ನೀಡಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಪಿ.ಡಿ.ಓ. ಅವರು ಕೂಡಲೇ ನೋಟಿಸ್ ಸಿದ್ದಪಡಿಸಿ ಕಟ್ಟಡ ನಿರ್ಮಾಣಕ್ಕೆ ಸಂಬಂದಪಟ್ಟವರಿಗೆ ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಇಂದು ಕಣ್ಯಾನ, ಕೆಂಚನೂರು, ಕಟ್‌ಬೆಲ್ತೂರ್, ದೇವಲ್ಕುಂದ ಗ್ರಾಮಸ್ಥರು ಒಗ್ಗೂಡಿ ಈ ಪ್ರತಿಭಟನೆ ನಡೆಸಿದ್ದೇವೆ. ಪ್ರತಿಭಟನೆಯ ಬಳಿಕ ಗ್ರಾಮಪಂಚಾಯತ್ ಪಿ.ಡಿ.ಓ. ಅವರಿಗೆ ಮನವಿಯನ್ನು ನೀಡಿದ್ದು ಅದಕ್ಕೆ ಸ್ಪಂಧಿಸಿದ ಅವರು ಕಾಮಗಾರಿ ನಡೆಸುತ್ತಿರುವ ಸಂಬಂದಪಟ್ಟವರಿಗೆ ನೋಟಿಸ್ ನೀಡಿ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದು ಅವರು ಅದಕ್ಕೆ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸಿದ್ದೇ ಆದಲ್ಲಿ ಗ್ರಾಮಸ್ಥರೇ ಇದನ್ನು ತಡೆದು ಉಘ್ರ ಹೋರಾಟಕ್ಕೆ ಮುಂದಾಗುತ್ತೇವೆ.
– ಸೋಮಶೇಖರ್ ಶೆಟ್ಟಿ ಕೋಕನಾಡಿ (ಪ್ರತಿಭಟನಾಕಾರರು)
ದೇವಲ್ಕುಂದ ಗ್ರಾಮದಲ್ಲಿ ಈವರೆಗೂ ಪರಿಸರ ಉತ್ತಮವಾಗಿದೆ. ಇಲ್ಲಿ ಮೀನುಸಂಸ್ಕರಣಾ ಘಟಕ ಮಾಡಿದರೇ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಪರಿಸರದಲ್ಲಿ ಮೀನುಸಂಸ್ಕರಣಾ ಘಟಕ ನಿರ್ಮಾಣ ಮಾಡಿದ್ರೇ ಉಘ್ರ ಹೋರಾಟ ಮಾಡುತ್ತೇವೆ.
– ವೀಣಾ (ಸ್ಥಳಿಯ ಮಹಿಳೆ)
ಸಂಬಂದಪಟ್ಟ ಇಲಾಖೆಯಿಂದ ನಿರಪೇಕ್ಷಣಾ ಪತ್ರ ತಂದ ಬಳಿಕವೇ ಗ್ರಾಮಪಂಚಾಯತ್ ಕಟ್ಟಡ ಪರವಾನಿಗೆ ನೀಡಿದ್ದೇವೆ. ಕೆಲವು ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಫಿಶ್ ಮೀಲ್ ಮಾಡುವ ಉದ್ದೇಶ ಅಥವಾ ಆಕಾಂಕ್ಷೆ ಗ್ರಾಮಪಂಚಾಯತಿಗೆ ಇಲ್ಲ. ಗ್ರಾಮಸ್ಥರ ತೀರ್ಮಾನಕ್ಕೆ ಬದ್ಧರಿದ್ದೇವೆ, ಅವರ ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಫಿಶ್ ಮೀಲ್ ವಿಚಾರದಲ್ಲಿ ಯಾವ ಹಸ್ತಕ್ಷೇಪವೂ ಪಂಚಾಯತ್ ಹಾಗೂ ಅಧಿಕಾರಿಗಳು ಮಾಡಿಲ್ಲ. ಕಾನೂನುಬಾಹಿರವಾಗಿ ಫಿಶ್ ಮೀಲ್ ಮಾಡುವುದೇ ಆದಲ್ಲಿ ಗ್ರಾಮಸ್ಥರ ಹೋರಾಟಕ್ಕೆ ನಮ್ಮ ಬೆಂಬಲವೂ ಇರುತ್ತದೆ.
– ಶರತ್ ಕುಮಾರ್ ಶೆಟ್ಟಿ (ಕಟ್‌ಬೆಲ್ತೂರು ಗ್ರಾಮಪಂಚಾಯತ್ ಉಪಾಧ್ಯಕ್ಷ)