ಕನ್ನಡ ವಾರ್ತೆಗಳು

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ : ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

DC_MEET_PICS

ಮ೦ಗಳೂರು ಡಿ,14: ಬೈಕಂಪಾಡಿ ಕೈಗಾರಿಕಾ ಪ್ರಮುಖ ರಸ್ತೆಗಳಲ್ಲಿ ಘನ ವಾಹನಗಳ ಅನಧಿಕೃತ ಪಾರ್ಕಿಂಗ್‌ನಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಹೊಂದಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಯನ್ನು ತೆರೆಯುವ ಸಂಬಂಧ ತ್ವರಿತಗತಿಯಲ್ಲಿ ಪ್ರಕ್ರಿಯೆ ನಡೆಸಬೇಕು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಖಾಲಿ ಇರುವ ನಿವೇಶನವನ್ನು ಗುರುತಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಭೂಮಿ ಕೋರಿ ಕೆ‌ಐ‌ಎಡಿಬಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ತಿಳಿಸಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೆಲವೆಡೆ ಖಾಲಿ ಜಾಗದಲ್ಲಿ ವಲಸೆ ಕಾರ್ಮಿಕರು ಟೆಂಟ್ ಕಟ್ಟಿ ವಾಸಿಸಿ, ಪರಿಸರ ಕೆಡಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಕೂಡಲೇ ಸಂಬಂಧಿಸಿದ ಜಮೀನಿನ ಸಂಸ್ಥೆಯವರಿಗೆ ನೋಟೀಸು ಜಾರಿ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದರು. ಇಲ್ಲಿನ ರಸ್ತೆಗಳಲ್ಲಿ ದಾರಿದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಕೆಗೆ ಹೆಚ್ಚುವರಿ ಅನುದಾನಕ್ಕೆ ಪರಿಶೀಲಿಸಬೇಕು. ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜೆಸ್ಕೋ ಸಂಸ್ತೆಗೆ ನೀಡಿರುವ ಭೂಮಿ ವಾಪಾಸಾತಿ ಕುರಿತು ಹೈಕೋರ್ಟ್‌ನಲ್ಲಿ ದಾವೆ ನಡೆಯುತ್ತಿದ್ದು, ಸದರಿ ಪ್ರಕರಣದಲ್ಲಿ ಕೆ‌ಐ‌ಎಡಿಬಿಯನ್ನು ಸೇರ್ಪಡೆಗೊಳಿಸುವ ಕಾನೂನಾತ್ಮಕ ಪ್ರಕ್ರಿಯೆ ಶೀಘ್ರಗೊಳಿಸಬೇಕು. ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಂಟ್ವಾಳ ತಾಲೂಕಿನ ಕೆನರಾ ಕೈಗಾರಿಕಾ ಪ್ರದೇಶ ಹಾಗೂ ಮಂಗಳೂರು ತಾಲೂಕಿನ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಜಮೀನು ಲಭ್ಯವಿದ್ದು, ಆಸಕ್ತರಿಗೆ ಮಂಜೂರುಗೊಳಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟೀ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Write A Comment