ಕನ್ನಡ ವಾರ್ತೆಗಳು

ಬ್ಯಾರಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಸಮಾರೋಪ : “ನಲ್ಮಾಲೆ” ಬ್ಯಾರಿ ಕವನ ಸಂಕಲನ ಬಿಡುಗಡೆ

Pinterest LinkedIn Tumblr

Townhall_byari_valdtion_1

ಮಂಗಳೂರು,ಡಿ.14 :ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆದ “ಬ್ಯಾರಿ ಸಾಕ್ಷ್ಯಚಿತ್ರ”, “ಕವನ ಸಂಕಲನ” ಬಿಡುಗಡೆ ಹಾಗೂ ರಾಜ್ಯದ 40 ತಂಡಗಳಿಗೆ ದಫ್ ಪರಿಕರ – ಸಮವಸ್ತ್ರ ವಿತರಣೆ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಚಿನ್ನಪ್ಪ ಗೌಡರವರು ಬಶೀರ್ ಅಹ್ಮದ್ ಕಿನ್ಯ ಬರೆದು ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಬ್ಯಾರಿ ಕವನ ಸಂಕಲನ “ನಲ್ಮಾಲೆ”ಯನ್ನು ಬಿಡುಗಡೆಗೊಳಿಸಿ, ನಾಡಿನ ಬಹುದೊಡ್ಡ ಶಕ್ತಿ ಬಹುತ್ವ. ಪರಸ್ಪರರ ಸಂಸ್ಕೃತಿ, ಭಾಷೆಗಳನ್ನು ಗೌರವಿಸುವ, ಬಹುತ್ವವನ್ನು ಒಪ್ಪಿಕೊಂಡಾಗ ಮಾತ್ರ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.

Townhall_byari_valdtion_2

ಒಂದು ಭಾಷೆ ಇನ್ನೊಂದು ಭಾಷೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹಾಗಾಗಿ ಬ್ಯಾರಿ ಭಾಷೆಯವರು ತುಳು ನಮಗೆ ಅಗತ್ಯವಿಲ್ಲ, ತುಳುವರು ಬ್ಯಾರಿ ನಮಗೆ ಸರಿಹೋಗುವುದಿಲ್ಲ ಎಂಬ ಪ್ರತ್ಯೇಕತಾ ಮನೋಭಾವನೆ ಬೆಳೆಸಿಕೊಳ್ಳದೆ ಬಹುತ್ವವನ್ನು ತಮ್ಮದಾಗಿಸಿಕೊಳ್ಳಬೇಕು. ಭಾಷೆಯನ್ನು ಮಾತನಾಡುವ, ಸಾಹಿತ್ಯ ವನ್ನು ಓದುವ ಹಾಗೂ ಸಂಸ್ಕೃತಿಯಲ್ಲಿ ಬದುಕುವ ವಾತಾವರಣ ಸೃಷ್ಟಿಯಾದಾಗ ಭಾಷೆ-ಸಾಹಿತ್ಯ ಹಾಗೂ ಸಂಸ್ಕೃತಿಯ ರಕ್ಷಣೆಯಾಗುತ್ತದೆ ಎಂದು ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ಬ್ಯಾರಿ ಸಂಸ್ಕೃತಿ’ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಂಸ್ಕೃತಿ ಚಿಂತಕ ಡಾ| ಬಿ.ಎ. ವಿವೇಕ ರೈ ಚಾಲನೆ ನೀಡಿದರು. ಬ್ಯಾರಿ ಕವನ ಸಂಕಲನ “ನಲ್ಮಾಲೆ”ಯ ಕೃತಿಗಾರ ಹಾಗೂ ಬಹುಭಾಷಾ ಕವಿ ಬಶೀರ್ ಅಹ್ಮದ್ ಕಿನ್ಯಾರವರನ್ನು ಅಭಿನಂದಿಸಲಾಯಿತು. ನಲ್ಮಾಲೆ ಕೃತಿಯ ಬಗ್ಗೆ ಬಿ.ಎ. ಮುಹಮ್ಮದ್ ಅಲಿ ಪರಿಚಯ ನೀಡಿದರು.

ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಇಸ್ಲಾಮಿಕ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಮ್. ಮುಮ್ತಾಝ್ ಅಲಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ.ಎಂ. ಅಸ್ಲಂ ಹಾಗೂ ಯುನಿವೆಫ್ ಅಧ್ಯಕ್ಷ ರಫೀ‌ಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಝೊಹರಾ ಅಬ್ಬಾಸ್ ವಂದಿಸಿದರು. ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ಬದ್ರುದ್ದೀನ್ ಕೆ.ಮಾಣಿ, ಹಮೀದ್ ಪಡುಬಿದ್ರಿ, ಆಯಿಶಾ ಪೆರ್ಲ, ಯೂಸುಫ್ ವಕ್ತಾರ್, ಅಬ್ಬಾಸ್ ಕಿರುಗುಂದ, ಮುಹಮ್ಮದ್ ಝಕಾರಿಯಾ, ಅಬ್ದುಲ್ ಲತೀಫ್ ನೇರಳಕಟ್ಟೆ, ಟಿ.ಎ.ಆಲಿಯಬ್ಬ ಜೋಕಟ್ಟೆ, ಮುಹಮ್ಮದ್ ಶರೀಫ್ ನಿರ್ಮುಂಜೆ ಹಾಗೂ ಅಕಾಡೆಮಿ ಮಾಜಿ ಸದಸ್ಯ ಖಾಲಿದ್ ಉಜಿರೆ ಮುಂತಾದವರು ಉಪಸ್ಥಿತರಿದ್ದರು.

Write A Comment