ಕನ್ನಡ ವಾರ್ತೆಗಳು

ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ : ಜಾಕಿರ್ ನಾಯ್ಕ್ ಜಿಲ್ಲಾ ಪ್ರವೇಶ ನಿರ್ಬಂಧಕ್ಕೆ ಒತ್ತಾಯ

Pinterest LinkedIn Tumblr

vhp pressmeet_1

ಮಂಗಳೂರು: ಹಿಂದು ಧರ್ಮ, ದೇವರನ್ನು ಹೀಯಾಳಿಸಿ ಭಾಷಣ ಮಾಡುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಜಾಕಿರ್ ನಾಯ್ಕಗೆ ಜಿಲ್ಲೆಯಲ್ಲಿ ಯಾವೂದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಡಾ. ಜಾಕಿರ್ ನಾಯ್ಕಗೆ ಮಂಗಳೂರು ಪ್ರವೇಶಿಸಲು ಜಿಲ್ಲಾಡಳಿತ ಯಾವೂದೇ ಕಾರಣಕ್ಕೂ ಅವಕಾಶ ಕೊಡಬಾರದು. ಕೊಟ್ಟಿದ್ದೇ ಆದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

vhp pressmeet_2

ಝಾಕಿರ್ ನಾಯ್ಕ್ ರನ್ನು ಕರೆತರಲು ಕರ್ನಾಟಕ ಸರಕಾರ ಸಂಪೂರ್ಣ ಸಹಕಾರವನ್ನು ನೀಡಿದೆ. ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಬೆಂಗಳೂರಿನ ಕಾರ್ಯಕ್ರಮಕ್ಕೆ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ಗೆ ಸಕಲೇಶಪುರ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ದೇಶ ವಿರೋಧಿ ಮತಪ್ರಚಾರಕ ಝಾಕಿರ್ ನಾಯ್ಕ್ ರನ್ನು ರಾಜ್ಯಸರಕಾರ ಹಾಗೂ ಜಿಲ್ಲಾಡಳಿತವೇ ಸ್ವಾಗತಿಸುತ್ತಿದ್ದು, ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ವಿರೋಧಿಸುವುದಾಗಿ ಅವರು ತಿಳಿಸಿದರು.

15 ಸಾವಿರಕ್ಕೂ ಹೆಚ್ಚು ಮಾಲಾಧಾರಿಳು ದತ್ತಪೀಠಕ್ಕೆ..

ಪ್ರತಿವರ್ಷದಂತೆ ಈ ಬಾರಿ ಕೂಡ ದತ್ತ ಜಯಂತಿಯ ಪ್ರಯುಕ್ತ ದತ್ತಮಾಲಾ ಅಭಿಯಾನ ಡಿ. 16ರಿಂದ ಆರಂಭವಾಗಿದೆ. ಡಿ. 24ರಂದು ಮಂಗಳೂರು ವಿಭಾಗದಿಂದ 15 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ಚಿಕ್ಕಮಗಳೂರಿನಲ್ಲಿರುವ ದತ್ತಪೀಠಕ್ಕೆ ತೆರಳಲಿದ್ದಾರೆ. ಮಂಗಳೂರು ನಗರದಿಂದ ಸುಮಾರು 3,000ರಷ್ಟು ದತ್ತಮಾಲಾಧಾರಿಗಳು ಮತ್ತು ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ವಿಎಚ್‌ಪಿ ಮುಖಂಡರಾದ ಭುಜಂಗ ಕುಲಾಲ್, ಭಾಸ್ಕರ್ ಧರ್ಮಸ್ಥಳ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Write A Comment