ಕನ್ನಡ ವಾರ್ತೆಗಳು

ಸ್ಕೂಟರ್‌ನಿಂದ ಹಣದ ಬ್ಯಾಗ್ ಕಳವು : ಸೊತ್ತು ಸಹಿತಾ ಆರೋಪಿ ಸೆರೆ

Pinterest LinkedIn Tumblr

rajaram_accsued_arerst

ಮಂಗಳೂರು, ಡಿ.18: ನಗರದ ವೆಲೆನ್ಸಿಯಾದಲ್ಲಿರುವ ಅಂಗಡಿಯೊಂದರ ಎದುರು ನಿಂತಿದ್ದ ಸ್ಕೂಟರ್ ಮೇಲಿರಿಸಿದ್ದ ಹಣದ ಬ್ಯಾಗ್‍ನ್ನು ಎಗರಿಸಿ ಪರಾರಿಯಾಗಿದ್ದ ಖದೀಮನನ್ನು ಬಂಧಿಸಿರುವ ಪೊಲೀಸರು ಆತ ಕಳ್ಳತನ ಮಾಡಿದ್ದ 80,000 ರೂ. ನಗದು ಸೇರಿದಂತೆ ಒಟ್ಟು 1,01,465 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಕಲ್ಮಂಜೆ ಗ್ರಾಮದ ಪಜರಡ್ಕ ತೇಜಾ ನಿಲಯದ ನಿವಾಸಿ, ದಿ.ನವೀನ್ ಪೂಜಾರಿಯವರ ಪುತ್ರ ರಾಜಾರಾಮ್ ಯಾನೆ ಗಣೇಶ್ ಎಂದು ಹೆಸರಿಸಲಾಗಿದೆ.

ವೆಲೆನ್ಸಿಯಾದ ಸಿಕ್ವೇರಾ ಕೋರ್ಟ್ ಬಿಲ್ಡಿಂಗ್‍ನಲ್ಲಿರುವ `ವೀಡಿಯೋ ಟ್ರಾನ್’ ಮೊಬೈಲ್ ರಿಚಾರ್ಜ್ ಅಂಗಡಿಯ ಮಾಲಕ ವಾಲ್ಟರ್ ಡಿ’ಸೋಜಾ ಅವರು ಡಿ.7ರಂದು ರಾತ್ರಿ 10.05 ಗಂಟೆಗೆ ಅಂಗಡಿಯನ್ನು ಬಂದ್ ಮಾಡಲು ಶೆಟರನ್ನು ಅರ್ಧ ಮುಚ್ಚಿ, ತನ್ನ ಕೈಯಲ್ಲಿದ್ದ ನಗದು ಹಾಗೂ ಮೊಬೈಲ್‍ಗಳಿದ್ದ ಬ್ಯಾಗನ್ನು ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ತನ್ನ ಸ್ಕೂಟರ್ ಮೇಲೆ ಇರಿಸಿ ಪುನ: ಅಂಗಡಿಯ ಬಳಿಗೆ ಬಂದು ಶೆಟರನ್ನು ಪೂರ್ತಿ ಬಂದ್ ಮಾಡಿ ಬೀಗ ಹಾಕಿ ಮನೆಗೆ ಹೋಗಲು ಸ್ಕೂಟರ್ ಬಳಿಗೆ ಬಂದಾಗ ಅದರ ಮೇಲೆ ಇರಿಸಿದ್ದ ಬ್ಯಾಗ್ ನಾಪತ್ತೆಯಾಗಿತ್ತು.

ಸದ್ರಿ ಬ್ಯಾಗ್‍ನಲ್ಲಿ ವ್ಯವಹಾರದ ಬಾಬ್ತು ನಗದು ಹಣ ಸುಮಾರು 80,000/- ಹಾಗೂ 25,000/- ರೂಪಾಯಿ ರಿಚಾರ್ಜ್ ಕರೆನ್ಸಿ ಹೊಂದಿದ್ದ 7 ಡೆಮೋ ಮೊಬೈಲ್‍ಗಳು ಸೇರಿದಂತೆ ಒಟ್ಟು ಸುಮಾರು 1,08,500/- ರೂ. ಮೌಲ್ಯದ ಸೊತ್ತುಗಳಿದ್ದವು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿಯವರಿಗೆ ದೊರೆತ ಖಚಿತ ಮಾಹಿತಿಯಂತೆ ಆರೋಪಿಯನ್ನು ನಿನ್ನೆ ಬಂಧಿಸಲಾಗಿದೆ.

Write A Comment