ಕನ್ನಡ ವಾರ್ತೆಗಳು

ಉಷಾ ಶೆಟ್ಟಿ ಸಾವು ಪ್ರಕರಣ : ಸಾವಿನ ರಹಸ್ಯ ಇನ್ನೂ ನಿಗೂಢ

Pinterest LinkedIn Tumblr

Usha_Shetty_Murder_1

ಮಂಗಳೂರು : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರ್ ಕೊಡಮಣಿತ್ತಾಯ ದೈವಸ್ಥಾನ ಪಕ್ಕದ ರಸ್ತೆಯಲ್ಲಿ ಶುಕ್ರವಾರ ಸಂಜೆ ದೇಹದ ಕೆಲವು ಭಾಗಗಳು ಸುಟ್ಟು ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಜೆಪ್ಪಿನಮೊಗರು ನಿವಾಸಿ ಉಷಾ ಶೆಟ್ಟಿ(29) ಸಾವಿನ ರಹಸ್ಯ ನಿಗೂಢವಾಗಿಯೇ ಉಳಿದಿದ್ದು, ನಿಗೂಢ ಸಾವಿನ ತನಿಖೆ ಮುಂದುವರಿದಿದೆ.

ಗುರುವಾರ ಮಧ್ಯಾಹ್ನದ ವೇಳೆ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಬೇಗನೆ ಹೊರಟಿದ್ದ ಉಷಾ ನೇರವಾಗಿ ಕಟೀಲಿಗೆ ತೆರಳುವ ಬಸ್ಸನ್ನು ಏರಿ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನ ಬಳಿ ಸ್ಟಾಪ್‍ನಲ್ಲಿ ಇಳಿದಿದ್ದರು ಎನ್ನಲಾಗಿದೆ. ಆಗಾಗ ಕಟೀಲಿಗೆ ತೆರಳುವ ವೇಳೆ ಈ ದಾರಿ ಪರಿಚಯವಿದ್ದ ಕಾರಣ ಅಲ್ಲೇ ಹಿಂಬದಿಯ ರಸ್ತೆಯಲ್ಲಿ ಸಾಗಿ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಇಬ್ಬರು ಪುಟ್ಟ ಹೆಣ್ಣು ಮಕ್ಕಳ ತಾಯಿಯಾಗಿರುವ ಉಷಾ ಖಿನ್ನತೆ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಪತಿ ಅಶ್ವಿನ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Usha_murder_yekkar_1

ಮೃತದೇಹದ ಬಳಿ ಪತ್ತೆಯಾದ ಡೆತ್ನೋಟ್ನಲ್ಲಿ `ನನ್ನ ಪರಿಸ್ಥಿತಿ ನನ್ನ ಮಕ್ಕಳಿಗೆ ಬರುವುದು ಬೇಡ’ ಎಂದು ಬರೆಯಲಾಗಿತ್ತು. ಉಷಾರವರ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿತ್ತು. ಇನ್ನು ಆರೋಗ್ಯದ ಸಮಸ್ಯೆಯಿಂದ ಎಕ್ಕಾರು ಕಡೆಗೆ ಔಷಧಿಗಾಗಿ ಪದೇ ಪದೇ ಹೋಗುತ್ತಿದ್ದು, ಗುರುವಾರ ಕೂಡಾ ಇಲ್ಲಿಗೆ ಹೋಗಿದ್ದರು. ಅಂಗಡಿಯೊಂದರಲ್ಲಿ ವಸ್ತುವಂದರ ದರ ವಿಚಾರಿಸಿ, ಬಳಿಕ ಅಲ್ಲಿಂದ ಅವರು ಕಟೀಲು ಕಡೆಯಿಂದ ಬಂದ ಕಾರೊಂದರಲ್ಲಿ ತೆರಳಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣದಂತೆ ತೋರಿದರೂ ಕಾರಿನಲ್ಲಿ ಹೋದದ್ದು ಯಾಕೆ, ಡೀಸೆಲ್ ಎಲ್ಲಿಂದ ಬಂತು, ಆತ್ಮಹತ್ಯೆಗೆ ಜೆಪ್ಪಿನಮೊಗರಿನಿಂದ ಎಕ್ಕಾರು ಕಡೆಗೆ ತೆರಳಿದ್ದಾರೆಯೇ, ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನೋಡಿದರೆ ಕೊಲೆಯ ಶಂಕೆಯೂ ವ್ಯಕ್ತವಾಗುವಂತಿದೆ.

ತನಿಖೆ ವೇಳೆ ಮೃತದೇಹದ ಬಳಿ ಪತ್ತೆಯಾದ ಬ್ಯಾಗ್, ಡೆತ್ ನೋಟ್, ಡೀಸೆಲ್ ಕ್ಯಾನನ್ನು ಪೊಲೀಸರು ವಿದಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ. ಅಲ್ಲದೆ ಉಷಾ ಅವರ ಮೊಬೈಲ್ ಕರೆ, ಕಚೇರಿ, ಸ್ನೇಹಿತರು ಮತ್ತು ಆಕೆಯ ಗಂಡ, ಮನೆಮಂದಿ ಹಾಗೂ ಆಕೆ ಕೆಲಸ ನಡೆಸುತ್ತಿದ್ದ ಸಂಸ್ಥೆಯಲ್ಲಿನ ಇತರ ಮಾಹಿತಿಗಳ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಉಷಾ ಬರೆದಿಟ್ಟಿದ್ದಾರೆನ್ನಲಾದ ಡೆತ್‍ನೋಟ್ ಬಗ್ಗೆ ತನಿಖೆಯೂ ನಡೆಯುತ್ತಿದೆ. ಅದರಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಸೂಚ್ಯವಾಗಿ ಬರೆದಿದ್ದು, ನನ್ನ ಪರಿಸ್ಥಿತಿ ನನ್ನ ಮಕ್ಕಳಿಗೆ ಬರುವುದು ಬೇಡ ಎಂದು ತಿಳಿಸಿದ್ದಾರೆನ್ನಲಾಗಿದೆ.

ಆಕೆ ಹತ್ಯೆಯಾದ ಶೈಲಿ ಹಾಗೂ ಪ್ರದೇಶವನ್ನು ಗಮನಿಸಿರುವ ಸ್ಥಳೀಯರು ಇದು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಜಪ್ಪಿನಮೊಗರು ನಿವಾಸಿ ಎಕ್ಕಾರಿಗೆ ಬಂದಿದ್ದು ಏಕೆ? ಒಂದುವೇಳೆ ದೇವಸ್ಥಾನಕ್ಕೆ ಬಂದಿದ್ದೇ ಆದರೆ ಡೀಸೆಲ್ ಕ್ಯಾನ್ ಎಲ್ಲಿ ಸಿಕ್ಕಿತು? ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಆಕೆ ದೇಹವನ್ನು ಸುಟ್ಟುಕೊಂಡ ರೀತಿಯ ಬಗ್ಗೆಯೂ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಕೆ ಮೃತದೇಹ ಸಿಕ್ಕಿರುವ ರೀತಿಯ ಬಗ್ಗೆಯೂ ಅನುಮಾನ ಮೂಡಿರುವುದರಿಂದ ತನಿಖೆ ನಡೆಯುತ್ತಿದೆ. ಒಟ್ಟಿನಲ್ಲಿ ಹಲವು ರೀತಿಯ ಪ್ರಶ್ನಾರ್ಥಕ ಚಿನ್ಹೆಗಳನ್ನು ಮೂಡಿಸುತ್ತಿರುವ ಈ ಸಾವಿನ ರಹಸ್ಯದ ಬಗ್ಗೆ ಪೊಲೀಸರು ನಾನಾ ಮಜಲುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Write A Comment