ಕನ್ನಡ ವಾರ್ತೆಗಳು

ದೇಶದಲ್ಲಿ ಸಂವಿಧಾನಬಾಹಿರ ಶಕ್ತಿಗಳ ಪ್ರಭುತ್ವ ಅಪಾಯಕಾರಿ ಬೆಳವಣಿಗೆ : ಜನನುಡಿ-2015 ಸಮಾರೋಪದಲ್ಲಿ ಅಮೀನ್ ಮಟ್ಟು

Pinterest LinkedIn Tumblr

jananudi_samaropa_1

ಮಂಗಳೂರು, ಡಿ.21: ದೇಶದಲ್ಲಿ ಸಂವಿಧಾನಬಾಹಿರವಾದ ಶಕ್ತಿಗಳು ಪ್ರಭುತ್ವವನ್ನು ನಡೆಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.

ಅವರು ಬಾನುವಾರ ನಂತೂರಿನ ಶಾಂತಿಕಿರಣದಲ್ಲಿ ಅಭಿಮತ ಸಂಘಟನೆಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ‘ಜನನುಡಿ-2015’ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಸಂವಿಧಾನ ಪ್ರಕಾರ ರಚನೆಯಾದ ಇತರ ಅಂಗ ಸಂಸ್ಥೆಗಳನ್ನು ಬದಿಗೆ ಸರಿಸಿ ಚುನಾವಣೆಯ ಮೂಲಕ ಆಯ್ಕೆಯಾಗದೆ ಇರುವ ಶಕ್ತಿಗಳು ಪ್ರಭುತ್ವವನ್ನು ಮುನ್ನಡೆಸುತ್ತಿವೆ. ದೇಶದ ಆಡಳಿತದ ನೀತಿಯನ್ನು ಅವರೇ ರೂಪಿಸು ತ್ತಿದ್ದಾರೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಹೇಳಿದರು.

ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡಿರುವುದು ಅಸಹಿಷ್ಣುತೆಯ ವಿರುದ್ಧ ಸಜ್ಜನರು ನಡೆಸಿದ ಪ್ರತಿಭಟನೆಯಾಗಿದೆ. ಇದರಿಂದ ದೇಶದಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು ಎಲ್ಲ ಕಾಲದಲ್ಲೂ ವೌನವಾಗಿರುತ್ತಾರೆ ಎನ್ನುವುದು ಸುಳ್ಳಾಗಿದೆ. ಇದೊಂದು ಮಹತ್ವದ ಬೆಳವಣಿಗೆ ಎಂದವರು ನುಡಿದರು.

ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅಸಹಿಷ್ಣುತೆ ಇತ್ತು. ಇದೇ ಕಾರಣಕ್ಕೆ ಬುದ್ಧ, ಬಸವಣ್ಣ, ಪೆರಿಯಾರ್, ನಾರಾಯಣ ಗುರು, ಅಂಬೇಡ್ಕರ್‌ರವರು ಅಸಹಿಷ್ಣುತೆಯ ವಿರುದ್ಧ ಹೋರಾಟದ ಚಳವಳಿ ರೂಪಿಸಿದ ಪರಂಪರೆ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಜನನುಡಿ ಸಾಂಸ್ಕೃತಿಕ ಮುಖವಾಡದ ರಾಜಕಾರಣವನ್ನು ಬಯಲು ಮಾಡುವಲ್ಲಿ, ಹೊಸ ಪರಂಪರೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ ಎಂದರು.

ಖ್ಯಾತ ವಿಮರ್ಶಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ಭಾರತದ ಸಮಗ್ರತೆ ಇರುವುದು ಅದರ ಬಹುತ್ವದಲ್ಲಿ. ಇಲ್ಲಿ ಬೆಳೆದು ಬಂದಿರುವ ಕೂಡು ಸಂಸ್ಕೃತಿ ಇಲ್ಲಿನ ವಿಶೇಷತೆಯಾಗಿದೆ. ಧರ್ಮಗಳ ಒಳಗಿರುವ ಮಾನವೀಯ ವೌಲ್ಯಗಳನ್ನು ಅರಿಯದೆ ಹೋದರೆ ನಾವು ಮತೀಯವಾದಿಗಳಾಗುತ್ತೇವೆ. ಮತೀಯವಾಗಿ ಸಮಾಜವನ್ನು ಧ್ರುವೀಕರಿಸುವುದೆಂದರೆ ಭಾರತವನ್ನು ನಾಶ ಮಾಡಿದಂತೆ. ಎಲ್ಲ ಧರ್ಮಗಳ ಮೂಲಭೂತವಾದಿಗಳಿಂದ ಮಹಿಳೆಯರ, ದುರ್ಬಲರ ಹಕ್ಕುಗಳು ದಮನಗೊಳ್ಳುತ್ತವೆ. ಒಂದು ಸಮುದಾಯವನ್ನು ದಮನ ಮಾಡಿ ಇನ್ನೊಂದು ಸಮುದಾಯವನ್ನು ಬಲಿಷ್ಠಗೊಳಿಸಲು ಅಸಾಧ್ಯ ಎಂದರು.

ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಮಾತನಾಡಿ, ಸಮಾಜದಲ್ಲಿ ಅವೈಜ್ಞಾನಿಕವಾದ ವಿಚಾರಗಳನ್ನು ಹರಡುತ್ತ ಭವಿಷ್ಯ, ಜ್ಯೋತಿಷ್ಯಗಳೆನ್ನುತ್ತ ಆಧಾರರಹಿತವಾಗಿ ರೋಗಗಳಿಗೆ ಮದ್ದು ನೀಡುತ್ತೇವೆ. ಬುದ್ಧಿಶಕ್ತಿ ಹೆಚ್ಚಿಸಲು ಮದ್ದು ನೀಡುವ, ಮೆದುಳಿನ ಶಕ್ತಿ ಹೆಚ್ಚಿಸಲು ಚಿಕಿತ್ಸೆ ನೀಡುವ ಅವೈಜ್ಞಾನಿಕ ವಿಚಾರಗಳ ವಿರುದ್ಧ ಜಾಗೃತಿ ಮೂಡಿಸಬೇಕಾಗಿದೆ. ಇದರ ಹಿಂದಿರುವ ಮುಖವಾಡಗಳನ್ನು ಬಯಲು ಮಾಡ ಬೇಕಾಗಿದ್ದು, ಇದರ ವಿರುದ್ಧ ನೇರ ಹೋರಾಟ ನಡೆಸಬೇಕಾಗಿದೆ ಎಂದರು. ನವೀನ್ ಸೂರಿಂಜೆ ಕಾರ್ಯಕ್ರಮ ನಿರೂಪಿಸಿದರು.

ವರದಿ ಕೃಪೆ : ವಾಭಾ

Write A Comment