ಕನ್ನಡ ವಾರ್ತೆಗಳು

ಆಳ್ವಾಸ್ ವಿರಾಸತ್ – 2015ರ ಅಂತಿಮ ಸಿದ್ಧತೆ

Pinterest LinkedIn Tumblr

alvas_virast_pic

ಮೂಡಬಿದಿರೆ,ಡಿ.21: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವರ್ಷಂಪ್ರತಿ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾತಸ್’. ಈ ವರ್ಷ ದಶಂಬರ 24ರಿಂದ 27ರ ವರೆಗೆ ‘ಆಳ್ವಾಸ್ ವಿರಾಸತ್ 2015 ನಡೆಯಲಿದ್ದು ಈಗಾಗಲೇ ಪೂರ್ವತಯಾರಿಗಳೆಲ್ಲವೂ ಮುಗಿದು ಅಂತಿಮ ಕ್ಷಣದ ಸಿದ್ಧತೆ ನಡೆಯುತ್ತಿದೆ.

ಆಳ್ವಾಸ್ ಆವರಣ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ವಿರಾಸತ್ ಕಾರ್ಯಕ್ರಮಗಳಿಗಾಗಿ ಸಿದ್ಧಗೊಂಡಿದೆ. 35,000 ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅವಕಾಶವಿರುವ ಬೃಹತ್ ಬಯಲುರಂಗ ಮಂದಿರ ಇದಾಗಿದ್ದು ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅತ್ಯದ್ಭುತ ಸಂವಹನ ನಡೆದು ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಇನ್ನಿಲ್ಲದ ಮೆರುಗು ತುಂಬಲಿದೆ. ವಿಶಿಷ್ಟ ಬಯಲುರಂಗಮಂದಿರ, ಅತೀ ಭವ್ಯ ವೇದಿಕೆ, ಸ್ವಚ್ಛ ಪರಿಸರ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷದ ಆಳ್ವಾಸ್ ವಿರಾಸತ್‌ಗೆ ಅತ್ಯಾಕರ್ಷಕ ಮೆರಗನ್ನು ನೀಡಲಿವೆ.

ಆಳ್ವಾಸ್ ವಿರಾಸತ್ ಉದ್ಘಾಟನೆಗೆ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ :
ದಿನಾಂಕ ಡಿ.24 ಗುರುವಾರ 5.15 ರಿಂದ 5.30 ರವರೆಗೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಗುತ್ತದೆ. ಸಂಜೆ ಗಂಟೆ 5.30 ರಿಂದ 6.45 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ‘ಆಳ್ವಾಸ್ ವಿರಾಸತ್ 2015′ರ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು, ಜನಮಾನಸದಲ್ಲಿ ಖಾವಂದರೆಂದು ಖ್ಯಾತರಾದ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಅದ್ವಿತೀಯ ಸಾಧಕರು, ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ.ಎನ್. ವಿನಯ ಹೆಗ್ಡೆಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರಾದ ಶ್ರೀ ಕೆ.ಅಭಯಚಂದ್ರ ಜೈನ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷರಾದ ನಾಡೋಜ ಡಾ.ಜಿ.ಶಂಕರ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಕೆ.ಎ.ದಯಾನಂದ, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಕೆ.ಅಮರನಾಥ ಶೆಟ್ಟಿ, ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀ ರಾಕೇಶ್ ಶರ್ಮ, ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪಿ.ಜಯರಾಮ ಭಟ್, ಹೋಟೆಲ್ ಪೆನಿನ್ಸುಲಾ, ಮುಂಬೈ ಮತ್ತು ಯು.ಎ.ಇಯ ಆಡಳಿತ ನಿರ್ದೇಶಕರಾಗಿರುವ ಶ್ರೀ ಕರುಣಾಕರ ಆರ್ ಶೆಟ್ಟಿ, ಅದಾನಿ ಸಂಸ್ಥೆಯ ಎಂ.ಡಿ. (ವ್ಯವಸ್ಥಾಪಕ ನಿರ್ದೇಶಕ) ಶ್ರೀ ರಾಜೇಶ್, ಯುಪಿಸಿ‌ಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮುಂಬೈನ ಶ್ರೀ ಸುರೇಶ್ ಭಂಡಾರಿ, ಹೋಟೆಲ್ ಗೋಲ್ಡ್ ಫಿಂಚ್‌ನ ಆಡಳಿತ ನಿರ್ದೇಶಕರಾಗಿರುವ ಶ್ರೀ ಪ್ರಕಾಶ್ ಶೆಟ್ಟಿ ಹಾಗೂ ಶ್ರೀ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್‌ನ ಆಡಳಿತ ನಿರ್ದೇಶಕರಾದ ಶ್ರೀ ಕೆ. ಶ್ರೀಪತಿ ಭಟ್‌ರವರ ಗೌರವ ಉಪಸ್ಥಿತಿಯು ಉದ್ಘಾಟನಾ ಸಮಾರಂಭಕ್ಕೆ ಶೋಭೆ ತರಲಿದೆ. ಸಭಾ ಸಮಾರಂಭವು ಮೊದಲ ದಿನ ಮಾತ್ರವಿದ್ದು ಉಳಿದ ಮೂರು ದಿನಗಳಲ್ಲಿ ದೀಪ ಪ್ರಜ್ವಲನ ಮಾತ್ರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ.

‘ಆಳ್ವಾಸ್ ವಿರಾಸತ್ 2015’ ಪ್ರಶಸ್ತಿ ಪುರಸ್ಕೃತರು ಖ್ಯಾತ ಗಾಯಕರಾದ ಪದ್ಮಶ್ರೀ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ :
ಹಿನ್ನಲೆ ಗಾಯಕ, ಹಾಡುಗಾರ, ನಟ, ಸಂಗೀತ ನಿರ್ದೇಶಕರಾಗಿ ಬಹುಮುಖ ಪ್ರತಿಭಾ ಸಂಪನ್ನ, ಆಬಾಲವೃದ್ಧರಾದಿಯಾಗಿ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಂಡಿರುವ, ಹಾಡುಗಾರಿಕೆಗೆ ಕೊಡಮಾಡುವ ಎಲ್ಲಾ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಪದ್ಮಶ್ರೀ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್ 2015 ‘ ರ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 1,00,000 ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದ್ದು ದಶಂಬರ 24 ರಂದು ‘ಆಳ್ವಾಸ್ ವಿರಾಸತ್ 2015’ ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು.

ಬಹುವಿಧ ಸಂಗೀತಗಳ ‘ನಾದ-ಗಾನ-ನೃತ್ಯ ವೈಭವ’ :
‘ಆಳ್ವಾಸ್ ವಿರಾಸತ್ 2015 ನಾಲ್ಕು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರು ನಾಗರಾಜ್, ಡಾ.ಮೈಸೂರು ಮಂಜುನಾಥ್, ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಚೆನ್ನೈಯವರ ನಾಲ್ಕು ವಯೋಲಿನ್‌ಗಳ ವಿಶೇಷ ಫ್ಯೂಜನ್, ಡಾ.ಕದ್ರಿ ಗೋಪಾಲನಾಥ್ ಮತ್ತು ಬಳಗದವರಿಂದ ವಿಶೇಷ ನಾದ ವೈಭವ ‘ರಾಗರಂಗೋಲಿ’, ಕಲೈಮಾಮಣಿ ಶಿವಮಣಿ ಮತ್ತು ಬಳಗದಿಂದ ವಿಶ್ವದ ಸಕಲ ಚರ್ಮ ವಾದ್ಯಗಳ ಕಲರವ ‘ನಾದಸಂಗಮ’ಗಳು ಸಂಗೀತ ನಾದಾಸಕ್ತರ ಮನಸೂರೆಗೊಳ್ಳಲಿವೆ.

ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ತಂಡದಿಂದ ‘ರಸಮಂಜರಿ’, ಮುಂಬೈನ ಖ್ಯಾತ ಕಲಾವಿದರಾದ ಉಸ್ತಾದ್ ಮುನಾವರ್ ಮಾಸುಮ್ ಮತ್ತು ಬಳಗದಿಂದ ‘ಕವ್ವಾಲಿ ಮತ್ತು ಸೂಫಿ ಹಾಡುಗಳು’ ಹಾಗೂ ಹೆಸರಾಂತ ಹಿನ್ನಲೆ ಗಾಯಕರುಗಳಾದ ವಿಜಯ ಪ್ರಕಾಶ್ ಮುಂಬೈ, ಕಾರ್ತಿಕ್ ಚೆನ್ನೈ, ಮಹಾಲಕ್ಷ್ಮೀ ಅಯ್ಯರ್ ಕೇರಳ ಮತ್ತು ತಂಡಗಳಿಂದ ‘ಸಂಗೀತ ವೈಭವ’ ಗಾಯನ ಕಾರ್ಯಕ್ರಮಗಳು ಗಾನಾಸಕ್ತರ ಚಿತ್ತಾಪಹಾರಕಗಳಾಗಲಿವೆ.

ಯಾವುದೇ ವೃತ್ತಿಕಲಾವಿದರಿಗೆ ಕಡಿಮೆಯಿಲ್ಲದ ಕಲಾನೈಪುಣ್ಯವನ್ನು ಕರಗತಮಾಡಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ರೂಪುಗೊಳ್ಳುವ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ವು ಜಾನಪದ ಮತ್ತು ಶಾಸ್ತ್ರೀಯ ನೃತ್ಯಾಸಕ್ತರ ಮನಸ್ಸಿಗೆ ಇನ್ನಿಲ್ಲದ ಮುದನೀಡಲಿವೆ.

ಆಳ್ವಾಸ್ ವರ್ಣವಿರಾಸತ್ 2015
ಆಳ್ವಾಸ್ ವಿರಾಸತ್ 2015 ರ ಪ್ರಯುಕ್ತ ಪ್ರತೀ ವರ್ಷದಂತೆ ಈ ವರ್ಷವು ‘ಆಳ್ವಾಸ್ ವರ್ಣವಿರಾಸತ್’ ನ್ನು ಆಯೋಜಿಸಲಾಗಿದೆ. ದಶಂಬರ 20ರಿಂದ 27 ರವರೆಗೆ 8 ದಿನಗಳ ಕಾಲ ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರ ಹಾಗೂ ದಶಂಬರ 23 ರಿಂದ 27 ರವರೆಗೆ ಐದು ದಿನಗಳ ಕಾಲ ಸಮಕಾಲೀನ ಚಿತ್ರಕಲಾ ಶಿಬಿರಗಳು ಆಳ್ವಾಸ್ ಆವರಣದ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿದೆ.

ರಾಷ್ಟ್ರಮಟ್ಟದ ಆದಿವಾಸಿ ಚಿತ್ರಕಲಾ ಶಿಬಿರದಲ್ಲಿ 15 ಆದಿವಾಸಿ ಹಾಗೂ ಸಾಂಪ್ರದಾಯಿಕ ಕಲಾವಿದರಿಂದ ವರ್ಲಿ, ಗೋಂಡು, ಭಿಲ್, ಪಡ್, ಬಿತಾರ, ಮಧುಬನಿ, ವಿನಾ, ಕಲಾಂಕಾರಿ ಹಾಗೂ ಹಸೆಚಿತ್ರ ಮೊದಲಾದ ಕಲಾ ಪ್ರಕಾರಗಳು ರಚನೆಗೊಂಡು ಪ್ರದರ್ಶನಗೊಳ್ಳಲಿವೆ.

ಸಮಕಾಲೀನ ಚಿತ್ರಕಲಾ ಶಿಬಿರದಲ್ಲಿ ವಿವಿಧ ರಾಜ್ಯಗಳ 20  ಶ್ರೇಷ್ಠ ಹಿರಿಯ ಕಲಾವಿದರುಗಳು ತಮ್ಮ ಚಿತ್ರಕಲಾ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ಇವರೆಲ್ಲರ ಕಲಾಕೃತಿ ರಚನಾ ನೈಪುಣ್ಯವನ್ನು ಕಣ್ತುಂಬಿಕೊಳ್ಳಲು, ಸವಿಯಲು ಹಾಗೂ ಕಲಾವಿದರೊಂದಿಗೆ ಮುಕ್ತ ಮಾತುಕತೆಯನ್ನಾಡಲು ಶಿಬಿರಗಳು ನಡೆಯುವ ದಿನಗಳಂದು ಬೆಳಿಗ್ಗೆ 9.00ರಿಂದ ರಾತ್ರಿ 9.00ರವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.

‘ಆಳ್ವಾಸ್ ವರ್ಣವಿರಾಸತ್ 2015’ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಡಾ. ಮನು ಪರೇಖ್ :
ಪದ್ಮಶ್ರೀ ಡಾ. ಮನು ಪರೇಖ್‌ರವರು ನಟರಾಗಿ, ವೇದಿಕೆ ವಿನ್ಯಾಸಕಾರರಾಗಿ, ಕಲಾವಿನ್ಯಾಸಕಾರರಾಗಿ, ಕರಕುಶಲ ಹಾಗೂ ಕೈಮಗ್ಗ ರಫ್ತು ನಿಗಮದಲ್ಲಿ ವಿನ್ಯಾಸ ಸಲಹೆಗಾರರಾಗಿ, ಚಿತ್ರಕಲಾವಿದರಾಗಿ ಬಹುಮುಖ ಪ್ರತಿಭೆಯಿಂದ ಪ್ರಸಿದ್ಧರಾದವರು.

ವೃತ್ತಿ ತೊರೆದು ಸ್ವತಂತ್ರ ಚಿತ್ರಕಲಾವಿದರಾಗಿ ಆಧುನಿಕ ಚಿತ್ರಕಲೆಯಲ್ಲಿ ವಿಶೇಷ ಪರಿಣತರಾದ ಇವರು ದೇಶ-ವಿದೇಶಗಳಲ್ಲಿ (ರಾಷ್ಟ್ರೀಯ ಆಧುನಿಕ ಕಲಾಗ್ಯಾಲರಿ ಹಾಗೂ ವಾಷಿಂಗ್‌ಟನ್, ನ್ಯೂಯಾರ್ಕ್, ಲಂಡನ್, ಇಟಲಿ, ಡೆನ್ಮಾರ್ಕ್) ಏಕವ್ಯಕ್ತಿ ಹಾಗೂ ಸಮೂಹ – ಚಿತ್ರಕಲಾಪ್ರದರ್ಶನಗಳನ್ನು ನೀಡಿದ್ದಾರೆ. ಇವರು ಈ ವರ್ಷದ ಪ್ರತಿಷ್ಠಿತ ‘ಆಳ್ವಾಸ್ ವರ್ಣವಿರಾಸತ್2015’ ರ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. 27.12.2015ರ ರವಿವಾರದ ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ‘ಆಳ್ವಾಸ್ ವರ್ಣವಿರಾಸತ್ 2015″ ಪ್ರಶಸ್ತಿ ನೀಡಿ ಪದ್ಮಶ್ರೀ ಡಾ.ಮನು ಪರೇಖ್‌ರವರನ್ನು ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 25,000 ನಗದನ್ನು ಒಳಗೊಂಡಿರುತ್ತದೆ.

ಆಳ್ವಾಸ್ ವಿರಾಸತ್ 2015 ರ ವಿಶೇಷ ಆಕರ್ಷಣೆಗಳು :
ಪ್ರಕೃತಿ ರಮಣೀಯ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದ್ದು ಪ್ರೇಕ್ಷಕರಲ್ಲಿ ಅತ್ಯದ್ಭುತ ಸಂಚಲನವನ್ನುಂಟು ಮಾಡಲಿದೆ. ಮನಸೂರೆಗೊಳ್ಳುವ ನೀರ ಝರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗನ್ನು ಇಮ್ಮಡಿಸಲಿವೆ. ಆವರಣದ ತುಂಬೆಲ್ಲಾ ವಿಶಿಷ್ಟವೂ, ವೈವಿಧ್ಯಮಯವೂ ಆಗಿರುವ ಆಳ್ವಾಸ್‌ನ ವಿಶಿಷ್ಟ ದೀಪಾಲಂಕಾರದ ವೈಭವವು ಕಣ್ಮನಸೂರೆಗೊಳ್ಳಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ.ಇದರ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ರವರು ತಿಳಿಸಿದ್ದಾರೆ.

Write A Comment