ಕನ್ನಡ ವಾರ್ತೆಗಳು

ಪಾಲಿಕೆಯ ಸಾಲದ ಹೊರೆ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ : ಶಾಸಕ ಲೋಬೊ ಸ್ಪಷ್ಟನೆ.

Pinterest LinkedIn Tumblr

Lobo_pm 2

ಮಂಗಳೂರು, ಡಿ.22: ಮಂಗಳೂರು ಮಹಾನಗರ ಪಾಲಿಕೆ ಸಾಲದ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಜೆ.ಆರ್.ಲೋಬೊ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಮನಪಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಗರದ ಪ್ರತಿಯೊಬ್ಬರ ಮೇಲೆ ತಲಾ 9,000 ರೂ. ಸಾಲದ ಹೊರೆ ಹಾಕಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಗೆ ಹಣ ಬರುತ್ತಿಲ್ಲ ಎಂದು ಪಾಲಿಕೆ ವಿರೋಧಿ ಹೇಳಿಕೆ ಸಮಂಜಸವಾದುದಲ್ಲ. ಪ್ರಥಮ ಹಂತದ ಎಡಿಬಿ ಯೋಜನೆಯಡಿ 378 ಕೋಟಿ ರೂ. ಖರ್ಚು ಮಾಡಲಾಗಿದ್ದು, ಹಣದ ಕೊರತೆಯಿಂದ ಕಾಮಗಾರಿ ಸಂಪೂರ್ಣ ಆಗಿಲ್ಲ. ಹಾಗಾಗಿ ಇನ್ನೂ ಸರಕಾರಕ್ಕೆ ಸಾಲ ಮರುಪಾವತಿ ಆರಂಭಿಸಲಾಗಿಲ್ಲ ಎಂದು ಹೇಳಿದರು.

ಪ್ರಥಮ ಹಂತದ ಎಡಿಬಿ ಯೋಜನೆಯಡಿ ಒಳಚರಂಡಿ ಯೋಜನೆಗಾಗಿ ಶೇ. 50ರಷ್ಟು ರಾಜ್ಯ ಸರಕಾರದಿಂದ ಅನುದಾನ ಪಡೆಯಲಾಗಿದ್ದು, ಶೇ.10ರಷ್ಟು ಮನಪಾ ಅನುದಾನ ಹಾಗೂ ಶೇ.40ರಷ್ಟು ಹಣವನ್ನು ಮಾತ್ರವೇ ಸಾಲ ಪಡೆಯಲಾಗಿದೆ. ಕುಡಿಯುವ ನೀರಿನ ಯೋಜನೆಗಾಗಿ ಶೇ.40ರಷ್ಟು ಸರಕಾರದಿಂದ ಅನುದಾನ, ಶೇ.10ರಷ್ಟು ಮನಪಾ ಅನುದಾನ ಹಾಗೂ ಶೇ.50 ರಷ್ಟು ಸಾಲವನ್ನು ಪಡೆಯಲಾಗಿದೆ.

Lobo_pm 1 Lobo_pm 3 Lobo_pm 4

ಇದೀಗ ದ್ವಿತೀಯ ಹಂತದಲ್ಲಿ 340 ಕೋಟಿ ರೂ. ಯೋಜನೆ ತಯಾರು ಮಾಡಲಾಗಿದೆ. ಇದು ಕೂಡಾ ಇದೇ ರೀತಿಯಲ್ಲಿ ರಾಜ್ಯ ಸರಕಾರದ ಅನುದಾನ ಹಾಗೂ ಸಾಲದ ರೂಪದಲ್ಲಿ ನೆರವೇರಲಿದೆ. ದೇಶದ ಮಹಾನಗರಗಳಲ್ಲೂ ಮೂಲಭೂತ ಅಭಿವೃದ್ಧಿ ಯೋಜನೆಗಳು ಸಾಲದ ಮೂಲಕವೇ ನೆರವೇರುತ್ತಿದೆ ಆ ಪೈಕಿ ಕಡಿಮೆ ಸಾಲ ಪಡೆದು ಮೂಲಭೂತ ಸೌಕರ್ಯ ಒದಗಿಸುತ್ತಿರುವ ನಗರ ಮಂಗಳೂರು ಆಗಿದೆ ಎಂದು ಅವರು ತಿಳಿಸಿದರು.

ಅಮೃತ್ ಯೋಜನೆಯ ಕುರಿತಂತೆಯೂ ಸ್ಪಷ್ಟನೆ ನೀಡಿದ ಶಾಸಕ ಜೆ.ಆರ್.ಲೋಬೊ, ಯೋಜನೆಯಡಿ 160 ಕೋಟಿ ರೂ. ಬಂದಿದ್ದು, 148 ಕೋಟಿ ರೂ. 1958-60ರಲ್ಲಿ ರಚಿಸಲಾದ ಹಳೆಯ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಬಳಸಲಾಗುವುದು. ನಗರದ ಪ್ರಮುಖ ಮಾರ್ಗಗಳಲ್ಲಿ ಒಳಚರಂಡಿ ವ್ಯವಸ್ಥೆ ಯನ್ನು ಮಾಡಿರುವುದರಿಂದ ಪ್ರಸ್ತುತ ಆಧುನಿಕ ತಂತ್ರಜ್ಞಾನದ ಮೂಲಕ ಹಳೆಯ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಅದಕ್ಕೂ ಹೆಚ್ಚಿನ ಅನುದಾನ ಬೇಕಾಗಿರುವುದ ರಿಂದ ಮನಪಾವು ರಾಜ್ಯ ಸರಕಾರಕ್ಕೆ ಪತ್ರ ಬರೆದು ಕೋರಿದೆ ಎಂದರು.

ಪ್ರಥಮ ವರ್ಷಕ್ಕೆ ಮನಪಾವು ಸರಕಾರದಿಂದ ಯಾವುದೇ ಅನುದಾನಕ್ಕೆ ಬೇಡಿಕೆ ಸಲ್ಲಿಸುವುದಿಲ್ಲ. 2ನೆ ವರ್ಷಕ್ಕೆ 25 ಕೋಟಿ ರೂ. ಹಾಗೂ 3 ಮತ್ತು 4ನೆ ವರ್ಷಕ್ಕೆ ತಲಾ 50 ಕೋಟಿ ರೂ. ಹಾಗೂ ಕೊನೆಯ ವರ್ಷ 20 ಕೋಟಿ ರೂ. ಅನುದಾನವನ್ನು ಕೋರಲಿದೆ. ಶೇ.30ರಷ್ಟು ಮನಪಾದ ಅನುದಾನ ಬಳಸಲಾಗುವುದು ಹಾಗೂ ಶೇ.20ರಷ್ಟು ರಾಜ್ಯ ಸರಕಾರ ಒದಗಿಸಲಿದೆ ಎಂದವರು ವಿವರಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ಮನಪಾ ಹಣ ಪಾವತಿಸಲು ಬಾಕಿ ಇರುವುದರಿಂದ ಕಂಪೆನಿ ಯೋಜನೆ ಸ್ಥಗಿತಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೋಬೋ, ಅಂತಹದ್ದೇನು ಸಮಸ್ಯೆ ಇಲ್ಲ. ಮನಪಾದಲ್ಲಿ ಹಣದ ಕೊರತೆ ಇದೆ. ಅದನ್ನು ಬಗೆ ಹರಿಸ ಲಾಗುವುದು. ಕಂಪೆನಿ ಜತೆ ಈಗಾಗಲೇ ಒಪ್ಪಂದವಾಗಿರುವುದರಿಂದ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Write A Comment