ಕನ್ನಡ ವಾರ್ತೆಗಳು

ಯುವಕ,ಯುವತಿ ಮಾತುಕತೆ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬ್ಲಾಕ್‌ಮೇಲ್ : ಇಬ್ಬರ ಸೆರೆ

Pinterest LinkedIn Tumblr

black_mail_cuple

ಮಂಗಳೂರು,ಡಿ.25: ಯುವಕನೊಬ್ಬ ಯುವತಿಯೊಂದಿಗೆ ಪಿಲಿಕುಳದ ಬಳಿ ಮಾತನಾಡುತ್ತಿದ್ದುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ 50 ಸಾವಿರ ರೂ. ನೀಡುವಂತೆ ಬ್ಲಾಕ್‌ಮೇಲ್ ಮಾಡಿದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ.

ಬಂಧಿತರನ್ನು ದೇವರಪದವು ನಿವಾಸಿಗಳಾದ ರಝಾಕ್ ಮತ್ತು ಅಪ್ರೋಝ್ ಎಂದು ಗುರುತಿಸಲಾಗಿದೆ. ಯುವಕ ಯುವತಿ ಮಾತನಾಡುತ್ತಿದ್ದ ಸ್ಥಳಕ್ಕೆ ಬಂದ ಇಬ್ಬರು ಆರೋಪಿಗಳು ಇವರು ಮಾತನಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಅರ್ಧ ಗಂಟೆಯೊಳಗೆ ಐವತ್ತು ಸಾವಿರ ರೂ. ನೀಡುವಂತೆ ಸೂಚಿಸಿದ್ದರು. ಹಣ ನೀಡದಿದ್ದರೆ ಮೊಬೈಲ್ ವಿಡಿಯೋವನ್ನು ಮನೆಯವರಿಗೆ, ಶಿಕ್ಷಣ ಸಂಸ್ಥೆಗಳಿಗೆ ತೋರಿಸುತ್ತೇವೆಂದು ಬ್ಲಾಕ್‌ಮೇಲ್ ಮಾಡಿದ್ದರು.

ಅರ್ಧ ಗಂಟೆಯೊಳಗೆ ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಯುವಕ ಮತ್ತು ಯುವತಿ ಪರಿಚಿತರಿಗೆ ತಿಳಿಸಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ನಿರ್ದೇಶನದಂತೆ ಯುವಕ ಮತ್ತು ಯುವತಿ ಆರೋಪಿಗಳಿಗೆ ವಾಮಂಜೂರುವಿನಲ್ಲಿ ಹಣ ನೀಡುವುದಾಗಿ ತಿಳಿಸಿದ್ದು ಅದರಂತೆ ಹಣ ಸಂಗ್ರಹಕ್ಕೆ ಬಂದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment