ಕನ್ನಡ ವಾರ್ತೆಗಳು

ಪುತ್ತಿಗೆಯ ಸಾಂಸ್ಕೃತಿಕ ಗಿರಿಯಲ್ಲೊಂದು ನಾದ ವೈಭವ`

Pinterest LinkedIn Tumblr

alvas_nada_swara_a

ಮೂಡಬಿದಿರೆ,ಡಿ.25:  ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರ. ಮೂವತ್ತು ಸಾವಿರಕ್ಕೂ ಮಿಕ್ಕಿದ ಕಲಾರಸಿಕರ ಸಂದಣಿ….ಕಣ್ಮನ ಸೆಳೆಯುವ ದೀಪಾಲಂಕಾರದ ಮಧ್ಯೆ ಮದುವಣಗಿತ್ತಿಯಂತೆ ಮಿನುಗುವ ಪುತ್ತಿಗೆಯ ಹಸಿರ ನೀರೆಗೊಂದು ಅಭೂತಪೂರ್ವ ಕ್ಷಣ…. ಇದು ಸಾಂಸ್ಕೃತಿಕ ಲೋಕವೇ ಮೈದಳೆದು ಬರುವಂತೆ ಉದ್ಘಾಟನೆಗೊಂಡ ಆಳ್ವಾಸ್ ವಿರಾಸತ್-2015 ರ ಚಿತ್ರಣ. ಈ ಬಾರಿಯ ವಿರಾಸತ್ ವಿಶೇಷತೆಗಳಿಗೊಂದು, ರಸಾಸ್ವಾದನೆಗೊಂದು ಅಪೂರ್ವ ವಾತಾವರಣವನ್ನು ಕಲ್ಪಿಸಿತ್ತು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ನಡೆದ ನಾಲ್ಕು ವಯೋಲಿನ್‌ಗಳ ವಿಶೇಷ ಫ್ಯೂಜನ್ `ನಾದಸುರಭಿ’ಯು ವಿರಾಸತ್ ಉತ್ಸವಕ್ಕೆ ವೈಭವದ ಸೊಬಗನ್ನು ನೀಡಿತ್ತು.

ಸುಮಾರು ಒಂದೂವರೆ ತಾಸಿಗಿಂತ ಹೆಚ್ಚು ಕಾಲ ನಡೆದ ಈ ನಾದಸುರಭಿ ಕಾರ್ಯಕ್ರಮ ನಾದ ಸರಸ್ವತಿಯ ಆರಾಧನೆಗೆ ಸಾಕ್ಷಿಯಾಗಿತ್ತು. ವಯೋಲಿನ್‌ನಲ್ಲಿ ಮೈಸೂರು ನಾಗರಾಜ್, ಡಾ. ಮೈಸೂರು ಮಂಜುನಾಥ್, ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಚೆನ್ನೈ ಸಹಕರಿಸಿದರೆ, ತಬ್ಲಾದಲ್ಲಿ ಪಂಡಿತ್ ರಾಮದಾಸ್ ಪಲ್ಸುಲೆ, ವಿಶೇಷ ತಾಳವಾದ್ಯ(ರಿದಂಪ್ಯಾಡ್)ದಲ್ಲಿ ಅರುಣ್ ಕುಮಾರ್ ಹಾಗೂ ಮೃದಂಗದಲ್ಲಿ ಶಂಕರ ಸ್ವಾಮಿ ಸಾಥ್ ನೀಡಿದರು. ಈ ನಾದಸುರಭಿಯು ವಿವಿಧ ರಾಗಗಳ ಜೊತೆಗೆ ಕಲಾವಿದರ ಸಹಭಾಗಿತ್ವದ ಪ್ರತೀಕವಾಗಿ ಮೂಡಿಬಂದಿತ್ತು. ಮೋಹನ ರಾಗ, ರಾಗಂ ತಾನಂ ಪಲ್ಲವಿ, ಸಿಂಧೂ ಭೈರವಿ ಹೀಗೆ ವಿವಿಧ ರಾಗಗಳ ರಸಾಸ್ವಾದನೆಯ ಜೊತೆಗೆ ಆಟವಾಡಿದ ಕಲಾವಿದರ ಕೈಚಳಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಜುಗಲ್‌ಬಂದಿಯ ಝಲಕ್:
ವಯೋಲಿನ್ ವಾದಕರು ನಾದಗಳ ಜಾರಿಸುವಿಕೆ-ಏರಿಸುವಿಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದರೆ, ತಬ್ಲಾ, ವಿಶೇಷ ವಾದ್ಯ, ಮೃದಂಗದ ನಡುವೆ ಸ್ಪರ್ಧಾತ್ಮಕ ಜುಗಲ್ ಬಂದಿ ಏರ್ಪಟ್ಟಿತ್ತು. ತ್ರಿಮುಕ್ತಾಯಗಳ ಜೊತೆಗೆ ಆಟವಾಡಿದ ಕಲಾವಿದರು ಗತಿಯನ್ನು ಮಾರ್ಪಾಡುಗೊಳಿಸುತ್ತಿದ್ದದ್ದು ವಿಶೇಷವಾಗಿತ್ತು. ರಾಗಗಳ ಮಧ್ಯೆ ತಾಳಗಳ ನಡುವಿನ ಏರಿಳಿತ, ಮುಕ್ತಾಯಗಳ ವೈವಿಧ್ಯತೆ ಸಂಗೀತ ಲೋಕದಲ್ಲೊಂದು ಅನನ್ಯ ಪ್ರಯೋಗವಾಗಿತ್ತು. ಜುಗಲ್‌ಬಂದಿಯ ನಡುವೆ ರಿದಂಪ್ಯಾಡ್ ವಾದಕರು ಅಲ್ಲಲ್ಲಿ ಘಂಟಾನಾದ, ಶಂಖನಾದ ಮಾಡುತ್ತಿದ್ದದ್ದು ನಾದವನ್ನು ಪುಷ್ಠೀಕರಿಸುವಂತಿತ್ತು. ಲಯಗಳನ್ನು ಬೇರ್ಪಡಿಸುವ ಜೊತೆಗೆ ಅಷ್ಟೇ ಸಲೀಸಾಗಿ ತಾಳಕ್ಕೆ ತಕ್ಕಂತೆ ಲಯವನ್ನು ಜೋಡಿಸಿದ ಕಲಾವಿದರು ತಾವೂ ಸಂತೋಷ ಪಡುತ್ತ ಪರರಿಗೂ ಸಂತೋಷ ಹರಿಸಿದ ಕಲಾಪ್ರೇಮ ವಿರಾಸತ್‌ಗೆ ಮೆರುಗನ್ನು ನೀಡಿತು.

ವಂದೇ ಮಾತರಂನ ಕಲರವ:
ಕಾರ್ಯಕ್ರಮದ ಅಂತ್ಯದಲ್ಲಿ ವಂದೇ ಮಾತರಂ ಗೀತೆ ಎಲ್ಲಾ ವಾದ್ಯಗಳ ವಿವಿಧ ಪ್ರಯೋಗಗಳ ಮಧ್ಯೆ ಮೂಡಿಬಂದದ್ದು ನಾದ ಸುರಭಿಯ ಸಫಲತೆಗೆ ಕಾರಣವಾಯಿತು. ಕಲಾವಿದರು ತಮ್ಮ ತಾಳಕ್ಕೆ ತಕ್ಕಂತೆ ಪ್ರೇಕ್ಷಕರಿಂದ ಜುಗಲ್ ಬಂದಿಯ ನಡುವೆ ತಾಳ ಹಾಕಿಸಿದ ಸನ್ನಿವೇಶ ಹರ್ಷದಾಯಕವಾಗಿತ್ತು. ವಿಶೇಷ ತಾಳವಾದ್ಯದಲ್ಲಿ ಸಹಕರಿಸಿದ ಅರುಣ್‌ಕುಮಾರ್‌ರವರು ವಿಶಿಷ್ಟ ಸಂಗೀತೋಪಕರಣವನ್ನು ಬಾಯಿಯ ಮೂಲಕ ಬಳಸಿ ಸಂಗೀತ ಸುಧೆ ಹರಿಸಿದ ರೀತಿ ಆಕರ್ಷಕ ಪ್ರಯೋಗಗಳಲ್ಲಿ ಒಂದಾಗಿತ್ತು. ಮೃದಂಗ ವಾದಕರ ಎಡ-ಬಲಗಳ ಸದ್ದು ವಯೋಲಿನ್‌ನ ನಾದವನ್ನು ಶ್ರೀಮಂತಗೊಳಿಸಿತ್ತು. ತಬ್ಲಾವಾದಕರ ಕೈಚಳಕ ಸ್ಪರ್ಧೆಗೆ ಆಗರವಾಗಿ ಸಫಲತೆಯನ್ನು ಸಾಧಿಸಿತು.

ಕಾರ್ಯಕ್ರಮದುದ್ದಕ್ಕೂ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತನಾದಗಳ ಮಿಶ್ರಣದ ಬಳಕೆ ನಾದಸುರಭಿಗೆ ಹೊಸ ಸೌರಭ ತಂದುಕೊಟ್ಟಿತು. ಪ್ರಸಿದ್ಧ ಹಾಡುಗಳ ರಾಗವನ್ನು ಅಲ್ಲಲ್ಲಿ ಬಳಸಿ ನಾದಲಹರಿ ಹರಿಯುವಂತೆ ಮಾಡಿದ ಕಲಾವಿದರ ಚಮತ್ಕೃತಿ ಪ್ರೇಕ್ಷಕರಿಗೆ ಇಷ್ಟದಾಯಕವಾಗಿತ್ತು. ವಿದ್ಯಾರ್ಥಿನಿ ಸಂತೋಷಿನಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸುದರ್ಶನ್ ವಂದಿಸಿದರು.

Write A Comment