ಕನ್ನಡ ವಾರ್ತೆಗಳು

ಫಾರ್ಮಾ ಪಾರ್ಕ್: ಮುಡಿಪುನಲ್ಲಿ ಭೂಮಿ ಒದಗಿಸಲು ಸಚಿವ ಯು.ಟಿ.ಖಾದರ್ ಸೂಚನೆ

Pinterest LinkedIn Tumblr

Dc_ut_kadar_1

ಮಂಗಳೂರು, ಡಿ.26 : ಆರೋಗ್ಯ ಇಲಾಖೆಗೆ ಸಂಬಂಧಿಸಿ ಫಾರ್ಮಾ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಒಪ್ಪಿಗೆ ಸೂಚಿಸಿ, ಭೂಮಿ ಒದಗಿಸುವಂತೆ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತುರ್ತುಸಭೆಯಲ್ಲಿ ದ.ಕ. ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಾಗದ ಬಗ್ಗೆ ಮಾಹಿತಿ ಪಡೆದ ಸಚಿವ ಖಾದರ್, ಬಂಟ್ವಾಳ ತಾಲೂಕಿನ ಇರಾ ಸಮೀಪದ ಮುಡಿಪುವಿನಲ್ಲಿ ಫಾರ್ಮಾ ಪಾರ್ಕ್ ನಿರ್ಮಾಣಕ್ಕೆ ಭೂಮಿಯನ್ನು ಒದಗಿಸಲು ಪ್ರಕ್ರಿಯೆ ಕೈಗೊಳ್ಳಲು ಸೂಚಿಸಿದರು. ಬೆಂಗಳೂರಿನಲ್ಲಿ ಸಚಿವ ಅನಂತಕುಮಾರ್ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಪಾರ್ಕ್ ನಿರ್ಮಾಣಕ್ಕೆ 100 ಎಕ್ರೆ ಭೂಮಿ ಅವಶ್ಯಕತೆ ಇದೆ. ಭೂಮಿಯನ್ನು ರಾಜ್ಯ ಸರಕಾರ ನೀಡಿದರೆ, ಕೇಂದ್ರ ಸರಕಾರ ಅನುದಾನ ಒದಗಿಸಿ ಎರಡು ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ಫಾರ್ಮಾ ಪಾರ್ಕ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಖಾದರ್ ತಿಳಿಸಿದರು.

ಫಾರ್ಮಾ ಪಾರ್ಕ್ ನಿರ್ಮಾಣದ ಸಂದರ್ಭ ತೊಕ್ಕೊಟ್ಟಿನಿಂದ ಈ ವ್ಯಾಪ್ತಿಯವರೆಗೆ 4 ಪಥದ ರಸ್ತೆ ನಿರ್ಮಾಣ ಹಾಗೂ ಮುಡಿಪುವಿನಿಂದ ಮೂಳೂರುವರೆಗೆ ರಸ್ತೆ ಉನ್ನತಿ ಕಾರ್ಯವೂ ನಡೆಯಲಿದೆ. ಫಾರ್ಮಾ ಪಾರ್ಕ್‌ನಲ್ಲಿ ಔಷಧ ತಯಾರಿ ಮಾಡುವ ವಿವಿಧ ಕಂಪೆನಿಗಳು ಇರಲಿವೆ. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಾನ್ಯತೆ ಪಡೆದಿರುವ ವಿವಿಧ ಔಷಧ ತಯಾರಿಕಾ ಕಂಪೆನಿಗಳು ಇಲ್ಲಿ ಔಷಧ ತಯಾರಿ ನಡೆಸಲಿವೆ. ಸುಮಾರು 2ರಿಂದ 3 ಸಾವಿರ ಜನರಿಗೆ ಉದ್ಯೋಗ ದೊರೆಯಲಿದ್ದು, ಔಷಧ ತಯಾರಿ ಮಾಡುವ ವಿವಿಧ ಕಂಪೆನಿಗಳು ರಾಜ್ಯದಲ್ಲಿ ಇದೆಯಾದರೂ, ಒಂದೇ ಕಡೆ ಕಂಪೆನಿಗಳು ವ್ಯವಸ್ಥಿತ ರೂಪದಲ್ಲಿಲ್ಲ.

ಗುಜರಾತ್ ಸೇರಿದಂತೆ ವಿವಿಧ ಭಾಗಗಳಲ್ಲಿ ಇಂತಹ ಪಾರ್ಕ್ ನಿರ್ಮಾಣವಾಗಿದೆ ಎಂದು ಖಾದರ್ ಹೇಳಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಕೆಐಎಡಿಬಿಯಲ್ಲಿರುವ ಇಲ್ಲಿನ ಭೂಮಿಯಲ್ಲಿ ಜೈಲು ನಿರ್ಮಾಣ ಕೂಡ ನಡೆಯಲಿದೆ. ಅದನ್ನು ಹೊರತುಪಡಿಸಿ ದಂತೆ 280 ಎಕ್ರೆ ಭೂಮಿ ಇದೆ. ಇದರಲ್ಲಿ 100 ಎಕ್ರೆಯನ್ನು ಫಾರ್ಮಾ ಪಾರ್ಕ್‌ಗೆ ನೀಡಲಾಗುತ್ತದೆ. ಉಳಿದುದರಲ್ಲಿ ಸುಮಾರು 100 ಎಕ್ರೆ ಭೂಮಿಯನ್ನು ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೂ ನೀಡಬಹುದಾಗಿದೆ ಎಂದು ತಿಳಿಸಿದರು. ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ದ್ಯಾಸೇಗೌಡ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಮಾರೂರು ರಾಮ್‌ಮೋಹನ್ ಪೈ ಉಪಸ್ಥಿತರಿದ್ದರು.

Write A Comment