ಮಂಗಳೂರು,ಡಿ.26: ಒಂದು ಊರು ಒಳ್ಳೆಯದಾಗಬೇಕಾದರೆ, ಅಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸ ಬೇಕಾದರೆ ಆ ಊರಿನ ದೇವಸ್ಥಾನ ಅಭಿವೃದ್ಧಿಯಾಗ ಬೇಕು. ಊರಿನ ಶ್ರೀಮಂತಿಕೆಯನ್ನು ಅಳೆಯಲು ಅಲ್ಲಿನ ದೇವಸ್ಥಾನವೊಂದೇ ಸಾಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಅಭಿಪ್ರಾಯಪಟ್ಟರು.
ಅವರು ತೌಡುಗೋಳಿಯ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರಗಳ ಪುನರ್ ನವೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ದುಡ್ಡಿದ್ದರೆ ಸುಖ ಶಾಂತಿ ಖಂಡಿತಾ ಸಿಗುವುದಿಲ್ಲ, ಅದನ್ನು ಮಾರ್ಕೆಟ್ ನಿಂದ ಖರೀದಿಸಲು ಬರುವುದಿಲ್ಲ, ಬ್ಯಾಂಕಿನಲ್ಲಿ ಇಡಲೂ ಸಾಧ್ಯವಿಲ್ಲ. ನಾವು ಮಾಡುವ ಸಂಪಾದನೆಯ ಹಣವನ್ನು ಸತ್ಕರ್ಮದಲ್ಲಿ ತೊಡಗಿಸಿದಾಗ ಅದು ಪುಣ್ಯವೆಂಬ ಧನವಾಗಿ ಮಾರ್ಪಟ್ಟು ಯಶಸ್ಸನ್ನು ಕಾಣಬಹುದು, ಆ ಮೂಲಕ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಸಂಪಾದಿಸಬಹುದು ಎಂದು ಅವರು ನಡಿದರು.
ದೇವಸ್ಥಾನ ನಿರ್ಮಾಣದ ಸತ್ಕರ್ಮದಲ್ಲಿ ಎಲ್ಲರೂ ತೊಡಗೋಣ, ಹತ್ತು ಜನ ಕೈಗೂಡಿಸಿದರೆ ತೌಡುಗೋಳಿಯ ಈ ಕ್ಷೇತ್ರ ವಿಶೇಷ ಸಾನಿಧ್ಯವಾಗಿ ಬೆಳಗುತ್ತದೆ, ಇಲ್ಲಿ ನಡೆಯುವ ಜೀರ್ಣೋದ್ಧಾರ ಕಾರ್ಯಗಳಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸೋಣ ಎಂದು ಲಕ್ಷ್ಮೀನಾರಾಯಣ ಆಸ್ರಣ್ಣರು ಕರೆ ನೀಡಿದರು.
ಸಾವಿರಾರು ಭಕ್ತ ಜನರ ಶೃದ್ಧಾ ಭಕ್ತಿಯ ಸೇವೆಯಿಂದ ತೌಡುಗೋಳಿಯ ಈ ಪುಣ್ಯ ನೆಲ ಇಂದು ಪ್ರಸಿದ್ದವಾಗಿ ಬೆಳಗಿದೆ. ಸಂಸ್ಕಾರಯುಕ್ತ ಸಮಾಜ ಧರ್ಮ ದೇವರ ಮೇಲೆ ನಂಬಿಕೆ ಇಟ್ಟು ಇಂತಹ ಮಹತ್ಕಾರ್ಯಗಳನ್ನು ಮಾಡುತ್ತಿದೆ. ಪುನರ್ ನಿರ್ಮಾಣಗೊಳ್ಳಲಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದ್ದಲ್ಲಿ ನಿರ್ಮಾಣ ಕೆಲಸಗಳು ಸಾಂಗವಾಗಿ ನಡೆಯಬಹುದು ಎಂದು ಶರವು ಕೇತ್ರದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಜನರಲ್ಲಿ ಧಾರ್ಮಿಕ ಭಾವನೆ, ಸಾಂಸ್ಕೃತಿಕ ಭಾವನೆಗಳು ಬೆಳೆಯಬೇಕಾದರೆ ದೇವಸ್ಥಾನಗಳ ಅಭಿವೃದ್ಧಿಯಾಗಬೇಕು. ಊರಿನ ಜನರು ಮಾಡುವ ಅಳಿಲ ಸೇವೆಯೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶ್ರೀ ವಜ್ರದೇಹಿ ಮಠದ ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಹೇಳಿದರು.
ತೌಡುಗೋಳಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಇದರ ಮಾಜಿ ಅಧ್ಯಕ್ಷರೂ ಆದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ದೀಪ ಬೆಳಗಿಸುವ ಮೂಲಕ ಶಿಲಾನ್ಯಾಸ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಹಾಗೂ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ದೇರಳಕಟ್ಟೆ ಇದರ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಇವರು ವಹಿಸಿದ್ದರು.
ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ, ಪರಿವಾದ ದೈವಗಳ ಸಾನಿಧ್ಯ ಹಾಗೂ ಇನ್ನಿತರ ಜೀರ್ಣೋದ್ಧಾರ ಕೆಲಸಗಳು ಕೇವಲ ಊರಿನವರಿಂದ ಸಾಧ್ಯವಿಲ್ಲ, ಪರವೂರಿನ ದಾನಿಗಳು, ಸಮಾಜದ ಧಾರ್ಮಿಕ ಮುಖಂಡರು ಮುಂದೆ ಬಂದು ಕೈಜೋಡಿಸಿದಲ್ಲಿ ಮಾತ್ರ ಸಾಧ್ಯ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯೊಂದಿಗೆ ಎಲ್ಲರ ಸಹಕಾರ ಅಗತ್ಯ ಎಂದು ವಿನಂತಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಮತಾ ಡಿ.ಎಸ್ ಗಟ್ಟಿ, ಸದಸ್ಯರು ದ.ಕ. ಜಿಲ್ಲಾ ಪಂಚಾಯತ್, ಡಿ.ಎಂ. ಕುಲಾಲ್, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ನಂದರಾಜ ಶೆಟ್ಟಿ, ಪಿಜಿನ ಬೈಲು, ಯುವ ಉದ್ಯಮಿ, ಶೈಲೇಂದ್ರ ಭರತ್ ನಾಯ್ಕ್ ನಚ್ಚ, ಆಡಳಿತ ಮೊಕ್ತೇಸರರು, ಶ್ರೀ ಉಳ್ಳಾಲ್ತಿ ದೈವಸ್ಥಾನ, ಕೂಟತ್ತಜೆ, ಡಾ. ಮುರಳೀಧರ್ ನಾಯಕ್, ಉಪಾನ್ಯಾಸಕರು ಹಿಂದಿ ಸ್ನಾತಕೋತ್ತರ ವಿಭಾಗ, ವಿ.ವಿ. ಕಾಲೇಜು, ಮಂಗಳೂರು. ಪದ್ಮನಾಭ. ಎನ್, ಸಮಾಜ ಸೇವಕರು ನರಿಂಗಾನ, ನಾರಾಯಣ ಭಟ್, ಲಾಡ, ನಿವೃತ್ತ ಶಿಕ್ಷಕರು, ಕೈರಂಗಳ ಹಿ.ಪ್ರಾ, ಶಾಲೆ, ಗುಣವಂತೇಶ್ವರ ಭಟ್, ಶಿಲ್ಪಶಾಸ್ತ್ರ ತಜ್ಞರು, ಕಾರ್ಕಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವರ್ಕಾಡಿ ಹೊಸಮನೆ ರಾಜೇಶ ತಾಳಿತ್ತಾಯರ ನೇತೃತ್ವದಲ್ಲಿ ಶಿಲಾನ್ಯಾಸದ ವೈದಿಕ ವಿಧಿ, ವಿದಾನಗಳು ನಡೆದವು, ಶ್ರೀಮತಿ ರೇಖಾ ಸತ್ಯನಾರಾಯಣ್ ಇವರಿಂದ ಕುಂಕುಮಾರ್ಚನೆ ನಡೆಯಿತು. ಎಕ್ಸೆಲೆಂಟ್ ಡಾನ್ಸ್ ಇನ್ಸಿಟ್ಯೂಟ್ ಸುರತ್ಕಲ್ ಸುನಿಲ್ ಶೆಟ್ಟಿ ಬಳಗದಿಂದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಮತ್ತು ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ, ತೌಡುಗೋಳಿ ಸಹಭಾಗಿತ್ವದಲ್ಲಿ ದಯಾನಂದ ಕತ್ತಲ್ಸಾರ್ ನಿರ್ವಹಣೆಯಲ್ಲಿ ‘ತುಳುನಾಡ ಐಸಿರಿ’ ನೃತ್ಯ ವೈಭವ ಹಾಗೂ ಗಾನ ಮಾಧುರ್ಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ಸ್ವಾಗತಿಸಿದರು, ನಾಗರಾಜ್ ರಾವ್ ವರ್ಕಾಡಿ ಧನ್ಯವಾದವಿತ್ತರು, ಶಿಶಾನ್ ಕೌಡೂರು ಕಾರ್ಯಕ್ರಮ ನಿರ್ವಹಿಸಿದರು.