ಮಂಗಳೂರು, ಡಿ.26: ಅಧಿಕೃತ ಅಭ್ಯರ್ಥಿಗಳು, ಬಂಡಾಯ ಆಭ್ಯರ್ಥಿಗಳ ಪ್ರಚಾರ, ಗೆಲುವಿನ ಲೆಕ್ಕಾಚಾರಗಳ ನಡುವೆ ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಅಧಿಕಾರಿಗಳು ಇಂದು (ಡಿ.26) ಬೆಳಗ್ಗೆ 9ರ ಬದಲು 11ಕ್ಕೆ ಚುನಾವಣಾ ಸಾಮಗ್ರಿಗಳನ್ನು ಪಡೆಯುವ ಮಸ್ಟರಿಂಗ್ ಕಾರ್ಯಕ್ಕೆ ಆಯಾಯ ತಾಲೂಕು ಕಚೇರಿಗಳಲ್ಲಿ ಹಾಜರಿರುವಂತೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 20 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರ ಈ ಬಾರಿ ಕುತೂಹಲ ಭರಿತ ಅಕಾಡವಾಗಿದೆ. ಇಲ್ಲಿ ಒಟ್ಟು ಎಂಟು ಮಂದಿ ಉಮೇದುವಾರರು ಕಣದಲ್ಲಿದ್ದಾರೆ. ಇಬ್ಬರಿಗೆ ಮಾತ್ರ ವಿಧಾನ ಪರಿಷತ್ ಪ್ರವೇಶಿಸಲು ಅವಕಾಶವಿದ್ದು, ನಾಳೆ ಮತದಾರ ಈ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾನೆ. ಅತ್ತ ಈ ಬಾರಿ ಕಾಂಗ್ರೆಸ್ನಿಂದ ಇಬ್ಬರು ಬಂಡಾಯವಾಗಿ ಸ್ಪರ್ಧಿಸಿರುವುದು ಚುನಾವಣಾ ಕಣ ರಂಗೇರುವಂತೆ ಮಾಡಿದ್ದರೆ, ಇತ್ತ ಬಿಜೆಪಿ ಮಾತ್ರ ಈ ಬೆಳವಣಿಗೆ ತಮ್ಮ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಎಂದು ನಿರಾಳವಾಗಿದೆ.