(ಸಾಂದರ್ಭಿಕ ಚಿತ್ರ) ಬೆಳ್ತಂಗಡಿ, ಡಿ.26: ತಾಲೂಕಿನ ತೋಟತ್ತಾಡಿಯ ಕುಟುಂಬವೊಂದು ಮನೆಗೆ ಬೀಗ ಹಾಕಿಕೊಂಡು ಕ್ರಿಸ್ ಮಸ್ ಪ್ರಾರ್ಥನೆಗೆಂದು ಚರ್ಚ್ ಗೆ ತೆರಳಿದ್ದಾಗ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಸೇರಿದಂತೆ ಸುಮಾರು 3,20.500 ರೂ. ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ.
ತೋಟತ್ತಾಡಿ ಗ್ರಾಮದ ಅಯ್ಯಪ್ಪಳ್ಳಿಲ್ ಮನೆ ನಿವಾಸಿ ಎಲಿಯಾಸ್ ಎನ್ನುವವರು ಮೊನ್ನೆ ರಾತ್ರಿ 11.45ರ ಸುಮಾರಿಗೆ ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತ ಕ್ರಿಸ್ ಮಸ್ ಪ್ರಾರ್ಥನೆಗೆಂದು ಸ್ಥಳೀಯ ಸೈಂಟ್ ಆಂಟನಿ ಚರ್ಚ್ ಗೆ ತೆರಳಿದ್ದರು. ನಿನ್ನೆ ಬೆಳಗಿನ ಜಾವ ಎರಡು ಗಂಟೆಗೆ ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಕಿರುಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಕೋಣೆಯಲ್ಲಿನ ಮರದ ಕಪಾಟನ್ನು ಒಡೆದು ಅದರಲ್ಲಿದ್ದ ನಗದು ಹಣ 1.50 ಲ.ರೂ., 80 ಗ್ರಾಂ ಚಿನ್ನಾಭರಣ, 50 ಗ್ರಾಮ ಬೆಳ್ಳಿಯ ಆಭರಣ, ಮೊಬೈಲ್ ಫೋನ್, ಮನೆಯ ಮೂಲ ದಾಖಲೆಗಳು, ವಿವಿಧ ಬ್ಯಾಂಕ್ ಗಳ ಒಟ್ಟು ಏಳು ಪಾಸ್ ಬುಕ್ ಗಳು, ಚೆಕ್ ಬುಕ್, ಆಧಾರ್ ಮತ್ತು ಪಾನ್ ಕಾರ್ಡ್ ಗಳು, ಜೊತೆಗೆ ಮನೆಯ ಹೊರಗಡೆಯಿದ್ದ 150 ಕೆ.ಜಿ. ರಬ್ಬರ್ ಶೀಟ್ ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಎಲ್ಲ ಸೊತ್ತುಗಳ ಮೌಲ್ಯ 3,20,500 ರೂ.ಗಳೆಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.