ಕನ್ನಡ ವಾರ್ತೆಗಳು

‘ಪಿಲಿಕುಳ ಹಬ್ಬ’ದಲ್ಲಿ ಸಾಂಸ್ಕೃತಿಕ ವೈವಿಧ್ಯ : ಜನಪದ ಕ್ರೀಡೆಗಳ ಆಕರ್ಷಣೆ

Pinterest LinkedIn Tumblr

Pilikula_habba_dhaph_1

ಮಂಗಳೂರು, ಡಿ.27: ದ.ಕ. ಜಿಲ್ಲಾಡಳಿತ ವತಿಯಿಂದ ಕೊಂಕಣಿ, ಬ್ಯಾರಿ, ತುಳು, ಕೊಡವ, ಅರೆಭಾಷೆ ಅಕಾಡಮಿಗಳ ಸಹಭಾಗಿತ್ವದಲ್ಲಿ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಡೆಯುತ್ತಿರುವ ಪಿಲಿಕುಳಹಬ್ಬಕ್ಕೆ ಇಂದು ಲಗೋರಿ, ಬಿಲ್ಲೀಸ್, ಕಲ್ಲಾಟ, ಲಗೋರಿ, ಬಚ್ಚ ಮೊದಲಾದ ಜನಪದ ಕ್ರೀಡೆಗಳು ಆಕರ್ಷಣೆ ನೀಡಿದವು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ದಫ್, ಮಹಿಳೆಯರಿಗೆ ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಉದ್ಘಾಟಿಸಿದರು. ಸ್ಪರ್ಧಾ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ಆರು ಸಾವಿರ ರೂ, ದ್ವಿತೀಯ ನಾಲ್ಕು ಸಾವಿರ ರೂ., ತೃತೀಯ ಎರಡು ಸಾವಿರ ರೂ. ಬಹುಮಾನ ನೀಡಲಾಯಿತು.

Pilikula_habba_dhaph_2 Pilikula_habba_dhaph_3

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ, ಮೂಡಾ ಆಯುಕ್ತ ಮುಹಮ್ಮದ್ ನಝೀರ್, ಹಮೀದ್ ಕಂದಕ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮರಬ್ಬ, ಕೊಡವ ಅಕಾಡಮಿ ಅಧ್ಯಕ್ಷ ಬಿದ್ದಾತಂಡ ತಮ್ಮಯ್ಯ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮಾ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್, ಎನ್.ಜಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ಇಂದು ಐಸ್‌ಕ್ರೀಂ ತಿನ್ನುವ ಸ್ಪರ್ಧೆ :

ಪಿಲಿಕುಳ ಹಬ್ಬದಲ್ಲಿ ಡಿ.27ರಂದು ನಿಸರ್ಗ ಫೌಂಡೇಶನ್ ಮತ್ತು ಡಿಂಕಿ ಡೈನ್ ವತಿಯಿಂದ ಮಕ್ಕಳಿಗೆ ಐಸ್‌ಕ್ರೀಂ ತಿನ್ನುವ ಸ್ಪರ್ಧೆ ನಡೆಯಲಿದೆ. ಬೆಂಕಿರಹಿತ ಅಡುಗೆ ಸ್ಪರ್ಧೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಪರಾಹ್ನ 2ರಿಂದ ಪ್ರಾರಂಭವಾಗಲಿವೆ.

ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಹಾಗೂ ಕಲ್ಕೂರ ಪ್ರತಿಷ್ಠಾನದ ನೇತೃತ್ವದಲ್ಲಿ ‘ಪಿಲಿಕುಳ ಹಬ್ಬ’ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Write A Comment