ಕನ್ನಡ ವಾರ್ತೆಗಳು

ಶಿವಮಣಿ ತಂಡದ ಸಂಗೀತ ಸಂಜೆಯ ನಾದಲಹರಿ : ವಿರಾಸತ್‌ನಲ್ಲಿ ಅನಾವರಣಗೊಂಡಿತು ವಾದ್ಯಝೇಂಕಾರಗಳ ರಸ ಸಂಭ್ರಮ

Pinterest LinkedIn Tumblr

Shivamani_Special_1

ಮೂಡುಬಿದಿರೆ, ಡಿ.27: ಆಳ್ವಾಸ್ ವಿರಾಸತ್ ಮೂರನೆ ದಿನವಾದ ಶನಿವಾರ ಮೂಡುಬಿದಿರೆಯ ಪುತ್ತಿಗೆ ಪದವಿನ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಸಂಗೀತ ಮಾಂತ್ರಿಕ ಕಲೈಮಾಮಣಿ ಶಿವಮಣಿಯವರಿಂದ ವಿಶ್ವದ ಸಕಲ ಚರ್ಮವಾದ್ಯಗಳಿಂದ ಕೂಡಿದ ‘ನಾದ ಸಂಗಮ’ ಕಾರ್ಯಕ್ರಮವು ನೆರೆದ ಸಾವಿರಾರು ಸಂಗೀತ ಪ್ರಿಯರ ಮನಸೂರೆಗೊಂಡಿತು.

`ನಾದಸಂಗಮ’-ಅಪೂರ್ವ ನಿನಾದಗಳ ಸಮಾಗಮ / ವಾದ್ಯಝೇಂಕಾರಗಳ ರಸಸಂಭ್ರಮ

ಮುಸ್ಸಂಜೆಯ ಹೊತ್ತಲ್ಲಿ ದಿನಮಣಿ ಕೆಳಗಿಳಿದದ್ದೇ ತಡ, ಶಿವಮಣಿ ವಿರಾಸತ್ ವೇದಿಕೆಯನ್ನು ರಂಗೇರಿಸಿದ ಕ್ಷಣ ಅದು….. ಮೂವತ್ತಕ್ಕೂ ಸಾವಿರ ಮಿಕ್ಕಿದ ಜನಸ್ತೋಮದ ಮಧ್ಯೆ ಎದೆ ಝಲ್ಲೆನ್ನುವಂತೆ, ಜನ ನಿಬ್ಬೆರಗಾಗಿ ನೋಡುವಂತೆ ನಾದಸಂಗಮ ಹರಿದ ಹೊತ್ತು ಅದು. ವಿರಾಸತ್‌ನ ಇಡೀ ಪ್ರೇಕ್ಷಕ ವರ್ಗವನ್ನೇ ಕುಳಿತಲ್ಲೇ ಕುಣಿಸಿದ ಶಿವಮಣಿ ತಂಡದ ಸಂಗೀತ ಸಂಜೆಯ ನಾದಲಹರಿ ಅಪೂರ್ವ ನಿನಾದಗಳ ಸಂಗಮವಾಗಿತ್ತು.ಕೇವಲ ಚರ್ಮವಾದ್ಯಗಳು ಮಾತ್ರವಲ್ಲದೇ ಮ್ಯಾಂಡೋಲಿನ್, ಕೀ ಬೋರ್ಡ್‌ನ ಸಾಥ್ ನಾದಸಂಗಮವನ್ನು ಸಾಕ್ಷಾತ್ಕರಿಸಿದ್ದು ಕಲಾರಾಧನೆಗೊಂದು ಭಾಷ್ಯ ಬರೆದಂತಿತ್ತು.

Shivamani_Special_2 Shivamani_Special_3 Shivamani_Special_4 Shivamani_Special_5 Shivamani_Special_6 Shivamani_Special_7 Shivamani_Special_8 Shivamani_Special_9 Shivamani_Special_10 Shivamani_Special_11 Shivamani_Special_12 Shivamani_Special_13 Shivamani_Special_14 Shivamani_Special_15 Shivamani_Special_16 Shivamani_Special_17 Shivamani_Special_18 Shivamani_Special_19 Shivamani_Special_20 Shivamani_Special_21 Shivamani_Special_22 Shivamani_Special_23

ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುತ್ತಿರುವ ವಿರಾಸತ್‌ನ ಮೂರನೇ ದಿನದ ಕಾರ್ಯಕ್ರಮದಲ್ಲಿ ಕಲೈಮಾಮಣಿ ಶಿವಮಣಿ ತಂಡದಿಂದ ಜರುಗಿದ `ನಾದಸಂಗಮ’ ಕಾರ್ಯಕ್ರಮ ಸಂಗೀತ ರಸಸಂಜೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು.

ಚರ್ಮವಾದ್ಯಗಳನ್ನು ಬಾರಿಸುವಲ್ಲಿ ಕಲೈಮಾಮಣಿ ಶಿವಮಣಿ ಪ್ರಚಂಡತೆಯನ್ನು ಮೆರೆದರೆ ಕೀಬೋರ್ಡ್‌ನಲ್ಲಿ ಹರ್ಮಿತ್ ಮನ್ಸೇಟ, ಮ್ಯಾಂಡೋಲಿನ್‌ನಲ್ಲಿ ಯು.ರಾಜೇಶ್ ಸಾಥ್ ನೀಡಿದರು. ಕಾರ್ಯಕ್ರಮದುದ್ದಕ್ಕೂ ನಾದವೇ ಕೇಂದ್ರಬಿಂದುವಾಗುವಂತೆ ವ್ಯವಹರಿಸಿದ ಕಲಾವಿದರು ಪ್ರಯೋಗಾತ್ಮಕ ನೆಲೆಯಲ್ಲಿ ಸಂಗೀತ ರಸವನ್ನು ಹರಿಸಿದುದು ವಿಶಿಷ್ಟವಾಗಿತ್ತು.

ರಿದಂಕಿಂಗ್ ಶಿವಮಣಿ:

ಸುಮಾರು 25ಕ್ಕೂ ಹೆಚ್ಚು ಚರ್ಮವಾದ್ಯಗಳನ್ನು ಬಾರಿಸುವಲ್ಲಿ ಸಾಹಸ ಮೆರೆದ ಶಿವಮಣಿ ವಿವಿಧ ಪ್ರಯೋಗಗಳಲ್ಲಿ ತೊಡಗಿಕೊಂಡದ್ದು ಅಪೂರ್ವವಾಗಿತ್ತು. ಕೋಲು ತಿರುಗಿಸಿ ಬಾರಿಸುವ ಕೈಚಳಕ ವಿಷಮ ತಾಳಗಳ ನಡುವೆ ಆಟವಾಡುವ ರೀತಿ,ಬಾಯಿಯ ಮೂಲಕ ರಿದಂ ಹೊರಡಿಸಿದ ಗಮ್ಮತ್ತು ಪ್ರೇಕ್ಷಕರನ್ನು ಗರಿಗೆದರಿಸುವಂತೆ ಮಾಡಿತು.

ಸ್ವರ ಮತ್ತು ತಾಳಗಳ ಬಡಿಯುವಿಕೆಯ ನಡುವಿನ ಚಮತ್ಕಾರ, ವೇಗ ಮತ್ತು ವಿಳಂಬಗತಿಯ ಬಳಕೆ, ಬಾಯಿಯ ಮೂಲಕ ಬೇರೆ ಬೇರೆ ಗತಿಯಲ್ಲಿ ಬಾಯಿತಾಳಗಳ ಉಚ್ಚಾರ ಶಿವಮಣಿಯ ಪ್ರೌಢಿಮೆಗೆ ಸಾಕ್ಷಿರೂಪವಾಗಿತ್ತು. ವಿವಿಧ ಪ್ರಯೋಗಗಳಲ್ಲಿ ತೊಡಗಿದ ಶಿವಮಣಿ ಕಾಲನ್ನು ಚರ್ಮವಾದ್ಯದ ಬಡಿಯುವಿಕೆಗೆ ವಿನಿಯೋಗಿಸಿಕೊಂಡದ್ದು ಸೋಜಿಗ ತರಿಸುವಂತಿತ್ತು. ಶಾಸ್ತ್ರೀಯ ಬಡಿತದಿಂದ ತಾಳ ಬದಲಾಗದಂತೆ ಒಮ್ಮೆಲೆ ಜಾನಪದ ನಾದಕ್ಕೆ ಧ್ವನಿಯನ್ನು ಮಾರ್ಪಾಡುಗೊಳಿಸಿದ್ದು ಪ್ರೇಕ್ಷಕರ ಕೂಗುವಿಕೆಯ ಮಾರ್ದನಿಗೆ ಪ್ರತಿಧ್ವನಿಯಾಗಿತ್ತು.

ಪಾತ್ರೆಗೆ ಕೋಲು ಬಡಿದು ಗೆಜ್ಜೆಯನ್ನು ನೀರೊಳಗೆ ಮುಳುಗಿಸಿ ನಾದ ಹರಿಸುವ ಜೊತೆಗೆ ಶಬ್ದ ತರಂಗವನ್ನು ಪ್ರವಹಿಸಿ ನೀರಿನ ಕಲರವದ ಧ್ವನಿ ಕೇಳುವಂತೆ ಮಾಡಿದ್ದು ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ಜಾಗಟೆ, ಡ್ರಮ್ಸ್, ಚೆಂಡೆ, ಚಕ್ರತಾಳ, ತಮಟೆ, ತಾಳಗಳ ಸರಪಣಿ, ತಬ್ಲಾ, ರಿದಂಪ್ಯಾಡ್ ಸೇರಿದಂತೆ ನಾನಾ ಬಗೆಯ ಸಂಗೀತ ಪರಿಕರಗಳನ್ನು ಬಳಸಿ ತಾನು ಅನುಭವಿಸಿ ರಸಾಸ್ವಾದ ಹರಿಸಿದ ಕೀರ್ತಿ ಶಿವಮಣಿಗೆ ಸಲ್ಲುತ್ತದೆ. ನೀರಿನ ಕ್ಯಾನ್‌ಗಳಲ್ಲಿ ತಬಲಾನಾದ ಹೊರಡಿಸಿದ್ದು, ಹಮ್ಮಿಂಗ್‌ಗಳ ಜೊತೆಗೆ ಆಟವಾಡಿದ್ದು ಶಿವಮಣಿಯ ವಿನೂತನ ಕಲಾಪ್ರೌಢಿಮೆಗೆ ಹಿಡಿದ ಕನ್ನಡಿಯಾಗಿತ್ತು.

ಕೇವಲ ಚರ್ಮವಾದ್ಯವನ್ನೇ ಬಳಸಿ `ಹ್ಯಾಪಿ ಬರ್ತ್‌ಡೆ ಟು ಆಳ್ವಾಸ್’, ಶಿವತಾಂಡವ ನೃತ್ಯದ ನಾದದ ಪಾಶ್ಚಾತ್ಯೀಕರಣ, `ಜೈ ಹೋ..’ ಗೀತೆ ಹಾಗೂ `ಹಮ್ಮಾ ಹಮ್ಮಾ’ಸೇರಿದಂತೆ ವಿವಿಧ ಸಿನಿಗೀತೆಗಳನ್ನು ಧ್ವನಿಗಳ ಜೊತೆಗೆ ಸಂಯೋಜನೆಗೊಳಿಸಿದ್ದು ವಿಶೇಷವಾಗಿತ್ತು.

ಮ್ಯಾಂಡೋಲಿನ್‌ನ ಮೆಲೊಡಿತನ:

ಶಿವಮಣಿಯು ಚರ್ಮವಾದ್ಯಗಳಲ್ಲಿ ತನ್ನ ಸೃಜನಶೀಲತೆಯನ್ನು ತೋರಿಸಿದರೆ, ಮ್ಯಾಂಡೋಲಿನ್‌ನಲ್ಲಿ ಯು.ರಾಜೇಶ್ ತಮ್ಮ ಪಾಂಡಿತ್ಯವನ್ನು ಮೆರೆದರು. ಮೋಹನರಾಗ ಸೇರಿದಂತೆ ವಿವಿಧ ರಾಗಗಳ ಸಂಯೋಜನೆಯನ್ನಾಧರಿಸಿದ ನಾದಲಹರಿ ಹರಿಸಿದ ಕೀರ್ತಿ ರಾಜೇಶ್‌ರಿಗೆ ಸಲ್ಲುತ್ತದೆ. `

ಆಡಿಸಿದಳೆಶೋದೆ ಜಗದೋದ್ಧಾರನ…..’, `ರಘುಪತಿ ರಾಘವ ರಾಜಾರಾಮ್…..’, `ಗೋವಿಂದ ….ಗೋಪಾಲ….’ಮೊದಲಾದ ಗೀತೆಗಳ ರಾಗವನ್ನು ಹರಿಸಿದ ರಾಜೇಶ್ ಮ್ಯಾಂಡೋಲಿನ್ ನುಡಿಸುವ ನಡುವೆ ವಿಷಮಗತಿಗಳನ್ನು ಬಳಸಿದ್ದು ವಿಶೇಷವಾಗಿತ್ತು. ಮ್ಯಾಂಡೋಲಿನ್ ತಂತಿಗಳನ್ನು ಸಡಿಲಿಸಿ, ಗಟ್ಟಿಗೊಳಿಸಿ ಸಂಗೀತ ಹೊರಡಿಸಿದ್ದು ಅವರ ಕಲಾನಿಷ್ಠೆಯನ್ನು ತೋರ್ಪಡಿಸುವಂತಿತ್ತು. ಮ್ಯಾಂಡೋಲಿನ್ ಮತ್ತು ಚರ್ಮವಾದ್ಯಗಳ ನಡುವೆ ಜುಗಲ್‌ಬಂದಿ ಏರ್ಪಟ್ಟಿದ್ದು ವಿನೂತನ ಪ್ರಯೋಗವಾಗಿತ್ತು.

ಕೀಬೋರ್ಡ್‌ನ ಕರಾಮತ್ತು:

`ಸರಿಗಮಪದನಿ’ಯ ಆವರ್ತನ ಮತ್ತು ಅಪವರ್ತನದ ಜೊತೆಗೆ ಆಟವಾಡಿದ ಹರ್ಮಿತ್ ಮನ್ಸೇಟ ಕೀಬೋರ್ಡ್‌ನಲ್ಲಿ ಕೌಶಲ್ಯ ಮೆರೆದದ್ದು ಸಂಗೀತ ಸಂಜೆಗೆ ಪೂರಕವಾಗಿತ್ತು. ಕೀಬೋರ್ಡ್ ಬಾರಿಸುವ ಜೊತೆ ಜೊತೆಗೆ ಸ್ವರಗಳನ್ನು ಉಚ್ಚರಿಸಿ ಕಲಾವಿದರ ಜೊತೆಗೆ ಸಾಮ್ಯತೆ ಮೆರೆದದ್ದು ಉತ್ತಮವಾಗಿತ್ತು. ವಿವಿಧ ಕಾಲಗಳಲ್ಲಿ ಕೀಬೋರ್ಡ್‌ನಲ್ಲಿ ಏರುಗತಿ ಮತ್ತು ಇಳಿಗತಿಯನ್ನು ತೋರ್ಪಡಿಸುವ ಜೊತೆಗೆ ಪಾಶ್ಚಾತ್ಯ ಮತ್ತು ಶಾಸ್ತ್ರೀಯ ನಿನಾದಗಳ ಮಿಶ್ರಣ ಮಾಡಿದ ಪ್ರಕ್ರಿಯೆ ವಿನೂತನವಾಗಿತ್ತು.

ಮಂಗಳೂರಿನ ಡ್ರಮ್ಸ್ ವಾದಕ ಸಚಿನ್ ಕಾರ್ಯಕ್ರಮದ ನಡುವೆ ಶಿವಮಣಿಯ ಜೊತೆಗೆ ಜುಗಲ್‌ಬಂದಿಯಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಡುವೆ ಪ್ರೇಕ್ಷಕರನ್ನು ತಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿಸಿಕೊಂಡ ಶಿವಮಣಿ ಓಂಕಾರ ನಾದವನ್ನು ಬಳಸಿ ಕಾರ್ಯಕ್ರಮವನ್ನು ಕೊನೆಗೊಳಿಸಿದರು.

ರೂಬಿನ್ ಮೆಥಾಯಸ್  ಕಾರ್ಯಕ್ರಮ ನಿರೂಪಿಸಿದರು. ಆಶಿಶ್ ಕುಲಾಲ್ ವಂದಿಸಿದರು.

ಚಿತ್ರ ಕೃಪೆ : ಮಾನಸ ಡಿಜಿಟಲ್‌ಸ್ ಮೂಡಬಿದಿರೆ.

Write A Comment