ಮ೦ಗಳೂರು ಡಿ.28: ಬಾಳೆಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದ್ದು ವೈಜ್ಞಾನಿಕವಾಗಿ ಇದನ್ನು ಮುಸಾ ಪಾರಾಡೈಸಿಕಾ ಎಂದು ಕರೆಯುತ್ತಾರೆ. ಇದೊಂದು ರುಚಿಕರವಾದ ಕಡಿಮೆ ಬೆಲೆಯಲ್ಲಿ ಅಧಿಕ ಪೌಷ್ಠಿಕಾಂಶವನ್ನು ಕೊಡುವ ಜನಪ್ರಿಯ ಹಣ್ಣು. ಬಾಳೆ ಈ ಜಿಲ್ಲೆಯ ಮುಖ್ಯ ಬೆಳೆಗಳಾದ ಅಡಿಕೆ ಹಾಗೂ ತೆಂಗಿನ ತೋಟದಲ್ಲಿ ಮಿಶ್ರಬೆಳೆಯಾಗಿ ಬೆಳೆಯಲು ಸೂಕ್ತವಾಗಿದೆ. ಈ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟ, ರೋಗಗಳು ಹಾಗೂ ಅದರ ಹತೋಟಿ ಕ್ರಮವನ್ನು ತಿಳಿಸಲಾಗಿದೆ.
ಬಾಳೆಯನ್ನು ಬಾಧಿಸುವ ಪ್ರಮುಖ ಕೀಟಗಳು: ಗೆಡ್ಡೆ ಕೊರೆಯುವ ಮೂತಿ ಹುಳು: ಗೆಡ್ಡೆ ಕೊರೆಯುವ ಮೂತಿಹುಳು ಬಾಳೆ ಗಿಡಕ್ಕೆ ಅತ್ಯಂತ ಹಾನಿಕಾರಕ ಕೀಟವಾಗಿದ್ದು. ಫ್ರೌಢಾವಸ್ಧೆಯ ಮೂತಿಹುಳು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಫ್ರೌಢ ಹುಳು ಮೊಟ್ಟೆಗಳನ್ನು ಒಂದೊಂದಾಗಿ ಬಾಳೆಯ ಕಾಂಡದ ಬುಡಭಾಗ ಅಥವಾ ಮಣ್ಣಿನೊಳಗೆ ಗೆಡ್ಡೆಯ ಮೇಲೆ ಇಡುತ್ತದೆ. ಹುಳುಗಳು ಕಾಂಡದ ಬುಡ ಮತ್ತು ಗೆಡ್ಡೆಯ ಭಾಗವನ್ನು ಕೊರೆದು ಅಡ್ಡಾದಿಡ್ಡಿ ಸುರಂಗಗಳನ್ನು ಮಾಡುತ್ತದೆ. ಎಳೆಯ ಗಿಡಗಳಲ್ಲಿ ಬೆಳವಣೆಗೆ ಕುಂಠಿತಗೊಂಡು ಸುಳಿ ಎಲೆಗಳು ಒಣಗುತ್ತವೆ. ಚೆನ್ನಾಗಿ ಬೆಳೆದ ಗಿಡಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಸಾಯುತ್ತವೆ.
ಹತೋಟಿ ಕ್ರಮ: ನಾಟಿ ಮಾಡುವ ಮೊದಲು ಪ್ರತೀ ಗುಣಿಗೆ 10 ಗ್ರಾಂ ಕಾರ್ಬೋಫ್ಯೊರಾನ್ 3ಜಿ ಅಥವಾ 10 ಗ್ರಾಂ ಫೋರೇಟ್ 10ಜಿ. ಹರಳುಗಳನ್ನು ಹಾಕಿ ನಾಟಿ ಮಾಡಬೇಕು. ಈ ಕೀಟದ ನಿರ್ವಹಣೆಗೆ ಮುಂಜಾಗರೂಕತೆಯಾಗಿ, ನಾಟಿಗೆ ಬಳಸುವ ಕಂದುಗಳ ಮೇಲ್ಬಾಗವನ್ನು ಕೆತ್ತಬೇಕು. ನಂತರ 40 ಗ್ರಾಂ ಶೇ. 3ರ ಕಾರ್ಬೋಫ್ಯೂರಾನ್ ಹರಳುಗಳನ್ನು ಉದುರಿಸಬೇಕು. ಆಮೇಲೆ ನಾಟಿ ಮಾಡಬೇಕು.
2. ಬಾಳೆಯ ಕಾಂಡ ಕೊರೆಯುವ ಹುಳು: ಈ ಕೀಟವು ಬಾಳೆಯನ್ನು ವರ್ಷವಿಡೀ ಬಾಧಿಸುತ್ತದೆ. ಇದು ಕೂಡಾ ಒಂದು ತರಹದ ಮೂತಿಹುಳು ಆದರೆ ಗೆಡ್ಡೆ ಕೊರೆಯುವ ಮೂತಿಹುಳುವಿಗಿಂತ ಭಿನ್ನವಾಗಿರುತ್ತದೆ. ಪ್ರೌಢ ಮೂತಿ ಹುಳು ಸುಮಾರು 22 ರಿಂದ28 ಮೀ.ಮೀ. ಉದ್ದವಿದ್ದು ಇವುಗಳ ಮೂತಿಯು ಚೂಪಾಗಿರುತ್ತದೆ. ಹೆಣ್ಣು ಪ್ರೌಢ ಹುಳು ಬಾಳೆಯಲ್ಲಿ ತನ್ನ ಮೂತಿಯಿಂದ ಕಾಂಡವನ್ನು ಕೊರೆದು ಒಳಗಡೆ ಮೊಟ್ಟೆಗಳನ್ನು ಇಡುತ್ತದೆ. ಮರಿಗಳು ಗಿಡದ ಕಾಂಡವನ್ನು ಕೊರೆದು ರಂಧ್ರಗಳನ್ನು ಮಾಡುತ್ತವೆ. ಇದರಿಂದ ಕ್ರಮೇಣ ಗಿಡಗಳು ಹಾಳಾಗುವುದನ್ನು ಕಾಣುತ್ತೇವೆ. ಈ ಕೀಟವು ಬಾಳೆಗೆ ಮಾತ್ರ ಹಾನಿ ಮಾಡುತ್ತದೆ.
ಹತೋಟಿ ಕ್ರಮ: ಗಿಡಗಳು 6 ರಿಂದ 7 ತಿಂಗಳು ಇರುವಾಗ 5 ಮೀ.ಲೀ. ಕ್ಲೋರೋಫೈರಿಫಾಸ್ ಅಥವಾ ಡೈಮೀಥೋಯೋಟ್ ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಕಾಂಡಕ್ಕೆ ಭೂಮಿಯಿಂದ ಒಂದು ಅಡಿ ಇತ್ತರಕ್ಕೆ ಚುಚ್ಚುಮದ್ದಿನ ಮೂಲಕ ಕೊಡಬೇಕು ಅಥವಾ ಕ್ಲೋರೋಫೈರಿಫಾಸ್ 2.5ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
3.ಸಸ್ಯ ಹೇನು: ಎಲೆ ಸುಳಿಗಳಲ್ಲಿ, ಎಲೆಗಳ ಅಂಚುಗಳಲ್ಲಿ ಹಾಗೂ ತೊಟ್ಟುಗಳ ಬುಡಗಳಲ್ಲಿ ಇದ್ದು ರಸ ಹೀರುತ್ತದೆ. ಈ ಕೀಟದ ಬಾಧೆಗೆ ತುತ್ತಾದ ಗಿಡದ ಸುಳಿಯು ಗಿಡ್ಡವಾಗಿ ಎಲೆಗಳು ಗುಂಪಾಗಿರುವುದನ್ನು ನೋಡಬಹುದು. ಈ ಕೀಟವು ಬಾಳೆಗೆ ಬಂಚಿಟಾಪ್ ಎನ್ನುವ ನಂಜುರೋಗವನ್ನು ಸಹ ಹರಡುತ್ತದೆ.
ಹತೋಟಿ ಕ್ರಮ: ಸಸ್ಯ ಹೇನುಗಳ ನಿಯಂತ್ರಣಕ್ಕಾಗಿ 0.5 ಮಿ.ಲೀ. ಫ್ಯಾಸ್ಫಾಮಿಡಾನ್ 86 ಡಬ್ಲೂ.ಎಸ್.ಸಿ. ಅಥವಾ 1.7 ಮಿ.ಲೀ. ಡೈಮೀಥೋಯೋಟ್ 30ಇ.ಸಿ. ಅಥವಾ ಇಮಿಡಾಕ್ಲೊಪ್ರಿಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪ್ರಮುಖ ರೋಗಗಳು
1. ಪನಾಮ ಸೊರಗು ರೋಗ: ಈ ಶಿಲೀಂಧ್ರ ರೋಗವು ಮಣ್ಣುಜನ್ಯವಾಗಿದ್ದು ಬಾಳೆ ಬೆಳೆಗೆ ಬರುವ ಅಪಾಯಕಾರಿ ರೋಗವಾಗಿದೆ. ಶಿಲೀಂಧ್ರವು ಬೇರುಗಳ ಮುಖಾಂತರ ಒಳಕ್ಕೆ ಹೋಗಿ ಗೆಡ್ಡೆಯ ಕಾಂಡದೊಳಗೆ ವೃದ್ಧಿಗೊಂಡು ಆಹಾರ, ನೀರು ಸರಬರಾಜಿನಲ್ಲಿ ಅಡಚಣೆ ಉಂಟುಮಾಡುವುದರಿಂದ ಗಿಡ ಸೊರಗಿ ಸಾಯುತ್ತದೆ. ಆರಂಭದಲ್ಲಿ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಎಲೆ, ಎಲೆತೊಟ್ಟು ಬಾಡಿ ಗಿಡ ಸೊರಗುತ್ತದೆ. ನಂತರ ಎಲ್ಲಾ ಎಲೆಗಳು ಹಳದಿಯಾಗುತ್ತಾ ಕಾಂಡದ ಸುತ್ತಲೂ ಬಾಗಿ ಜೋತು ಬೀಳುತ್ತದೆ. ಇಂತಹ ಗಿಡಗಳಲ್ಲಿ ರೋಗ ತೀವ್ರ ಹಂತ ತಲುಪಿದಾಗ ಬುಡ ಸೀಳಿ ಉದ್ದನೆಯ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ರೋಗದಿಂದ ನರಳುತ್ತಿರುವ ಗಿಡಗಳ ದಿಂಡು ಮತ್ತು ಗೆಡ್ಡೆಗಳನ್ನು ಅಡ್ಡವಾಗಿ ಕತ್ತರಿಸಿದಾಗ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗಿದ ಒಳಗಿನ ಅಂಗಾಂಶಗಳು ಕಂಡುಬಂದು ಸತ್ತು ಹೋದಂತಿರುತ್ತವೆ.
ಹತೋಟಿ ಕ್ರಮ: ನಾಟಿಗೆ ಮುಂಚೆ ಕಂದುಗಳನ್ನು20 ಗ್ರಾಂ. ಕಾರ್ಬೆಂಡೈಜಿಮ್ 10 ಲೀ. ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ ಅರ್ಧ ಘಂಟೆಗಳ ಕಾಲ ಅದ್ದಿ ನಂತರ ನಾಟಿ ಮಾಡಬೇಕು. ರೋಗವನ್ನು ಹತೋಟಿ ಮಾಡಲು 2 ಗ್ರಾಂ. ಕಾರ್ಬೆಂಡೈಜಿಮ್ ಪ್ರತೀ ಲೀಟರ್ ನೀರಿನಲ್ಲಿ ಕರಗಿಸಿ ಗಿಡದ ಬುಡಕ್ಕೆ 5,7 ಮತ್ತು 9 ನೇ ತಿಂಗಳಿನಲ್ಲಿ ಪ್ರತೀ ಗಿಡಕ್ಕೆ 2 ರಿಂದ 3 ಲೀಟರ್‌ನಷ್ಟು ಕೊಟ್ಟು ನೆನಸಬೇಕು. ರೋಗ ಬಂದಂತಹ ಗಿಡದಿಂದ ನೀರು ಆರೋಗ್ಯವಂತ ಗಿಡಗಳಿಗೆ ಹರಿಯದಂತೆ ಎಚ್ಚರವಹಿಸಬೇಕು.
2. ಎಲೆಗುಚ್ಛ ನಂಜು ರೋಗ (ಬಂಚಿಟಾಪ್): ಈ ರೋಗವು ಸಸ್ಯ ಹೇನುಗಳ ಮುಖಾಂತರ ಹರಡುತ್ತದೆ. ಬಾಳೆ ಗಿಡವು ಅತೀ ಗಿಡ್ಡವಾಗಿ ಎಲೆಗಳು ತುದಿಯಲ್ಲಿ ಪೊದೆಯಂತೆ ಕಾಣುತ್ತವೆ. ಇಂತಹ ಗಿಡಗಳಲ್ಲಿ ಗೊನೆ ಬಿಡುವುದಿಲ್ಲ. ಎಲೆಗಳು ಮುರುಟಾಗಿ ಬಹಳ ಸಣ್ಣವಿರುತ್ತವೆ. ಗಿಡಗಳ ಕಂದುಗಳು ಗಿಡ್ಡವಿದ್ದು, ಕಪ್ಪಾಗಿ ಸಾಯುತ್ತವೆ.
ಹತೋಟಿ ಕ್ರಮ: ರೋಗ ಪೀಡಿತ ಗಿಡಗಳನ್ನು ಗುರುತಿಸಿ, ಕೂಡಲೇ ಅಗೆದು ತೆಗೆದು ಕತ್ತರಿಸಿ ನಾಶಪಡಿಸಿ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಬಂಚಿಟಾಪ್ ನಂಜು ರೋಗವನ್ನು ಹರಡುವ ಸಸ್ಯ ಹೇನುಗಳ ನಿಯಂತ್ರಣಕ್ಕಾಗಿ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಅಥವಾ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವಂತೆ ಉಪನಿರ್ದೇಶಕರು ತೋಟಗಾರಿಕಾ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.