ಮಂಗಳೂರು, ಡಿ.29: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಹುದ್ದೆಯಿಂದ ಡಿವೈಎಸ್ಪಿ/ಎಸಿಪಿಯಾಗಿ ಪದೋನ್ನ್ನತಿ ಪಡೆದು ತಾತ್ಕಾಲಿಕ ನೆಲೆಯಲ್ಲಿದ್ದ 217 ಮಂದಿಗೆ ಮುಂಭಡ್ತಿಯ ಖಾಯಂ ಆದೇಶವನ್ನು ಹೊರಡಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತನ್ನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ನಾಗರಿಕ ಸೇವಾ ನಿಯಮ 32ರ ಅಡಿ ಪದೋನ್ನತಿಯ ಮೇರೆಗೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಡಿವೈಎಸ್ಪಿ, ಎಸಿಪಿಗಳಾಗಿ ತಾತ್ಕಾಲಿಕ ನೆಲೆಯಲ್ಲಿ ಮುಂಭಡ್ತಿ ಪಡೆದಿರುತ್ತಾರೆ. ಆದರೆ ಅವರ ಕರ್ತವ್ಯ ಖಾಯಂ ಆಗದ ಕಾರಣ ಈ ಪೊಲೀಸರು ನಿವೃತ್ತರಾಗುವ ಸಂದರ್ಭ ಅಥವಾ ಕೆಲವೊಂದು ನಿರ್ದಿಷ್ಟ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಮುಂಭಡ್ತಿಯ ಖಾಯಂ ಆದೇಶವಿಲ್ಲದೆ ಪ್ರಕರಣಗಳೇ ಬಿದ್ದು ಹೋಗುವ ನಿದರ್ಶನಗಳೂ ಇರುವುದರಿಂದ ಈ ಬಗ್ಗೆ ಕಳೆದ ಅಧಿವೇಶನದಲ್ಲಿ ಗಮನ ಸೆಳೆಯುವ ಪ್ರಶ್ನೆಯನ್ನು ಮಂಡಿಸಿದ್ದೆ ಎಂದು ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನ್ನ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಡಿವೈಎಸ್ಪಿ ಹುದ್ದೆಗೆ ನೇರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದ್ದರೂ ಅದರಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ನೇಮಕಾತಿಯ ನಂತರ 2 ವರ್ಷಗಳ ನಿಗದಿತ ತರಬೇತಿ ಪೂರೈಸಿದ ನಂತರವೇ ಅವರ ಸೇವೆ ಲಭ್ಯವಾಗುವುದರಿಂದ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮತ್ತು ತನಿಖೆಗಳನ್ನು ಸುಗಮವಾಗಿ ನಿರ್ವಹಿಸಲು ನೇರ ನೇಮಕಾತಿ ಅನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ಭರ್ತಿ ಮಾಡಲಾಗುತ್ತಿದೆ. ಈ ಕಾರಣದಿಂದ ಡಿವೈಎಸ್ಪಿ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರ ಅನಿವಾರ್ಯ. ಮುಂಬಡ್ತಿ ಹುದ್ದೆಗಳು ಲಭ್ಯವಾದಾಗ ಸ್ವತಂತ್ರ ಪ್ರಭಾರದಲ್ಲಿರುವ ಅಧಿಕಾರಿಗಳನ್ನು ನಿಯಮಾನುಸಾರ ಕ್ರಮಬದ್ಧಗೊಳಿಸಲಾಗುತ್ತದೆ.
ಪ್ರಸ್ತುತ ಹೈದರಾಬಾದ್ ಕರ್ನಾಟಕ ವೃಂದದ 23 ಹಾಗೂ ಇತರ ವೃಂದದ 194 ಡಿವೈಎಸ್ಪಿ ಹುದ್ದೆಗಳಿಗೆ ಮುಂಭಡ್ತಿ ನೀಡುವ ಪ್ರಸ್ತಾವನೆ ಸರಕಾರದ ಮುಂದಿದ್ದು, ನಿಯ ಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಡಿ.17ರಂದು ಈ ಬಗ್ಗೆ ಖಾಯಂ ಆದೇಶವನ್ನು ಸರಕಾ ರದಿಂದ ಹೊರಡಿಸಲಾಗಿದೆ. ಅದರಂತೆ ಮಂಗಳೂರು ನಗರ ಸಂಚಾರ ಉಪ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಉದಯ ಎಂ. ನಾಯಕ್, ಕೇಂದ್ರ ಉಪವಿಭಾಗದ ತಿಲಕ್‌ಚಂದ್ರ ಕೆ., ಉತ್ತರ ಉಪವಿಭಾಗದ ಮದನ್ ಎ. ಗಾಂವ್ಕರ್, ಡಿಸಿಆರ್‌ಬಿಯ ಭಾಸ್ಕರ್ ರೈ ಎನ್.ಜಿ. ಮೊದಲಾದವರಿಗೆ ಮುಂಭಡ್ತಿಗೊಂಡ ಖಾಯಂ ಆದೇಶ ದೊರಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ಮನುರಾಜ್ ಉಪಸ್ಥಿತರಿದ್ದರು.