ಕನ್ನಡ ವಾರ್ತೆಗಳು

ವಿಧಾನ ಪರಿಷತ್ ಚುನಾವಣೆ: ಮತ ಏಣಿಕೆ ಪ್ರಕ್ರಿಯೆ ಆರಂಭ – ಎಂಟು ಮಂದಿ ಅಭ್ಯರ್ಥಿಗಳಲ್ಲಿ ಇಬ್ಬರ ಭವಿಷ್ಯ ನಿರ್ಧಾರ

Pinterest LinkedIn Tumblr

Vote_Counting_Start_1

ಮಂಗಳೂರು, ಡಿ.30: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ನಗರದ ಲೇಡಿಹಿಲ್ ವಿಕ್ಟೋರಿಯಾ ಬಾಲಿಕೆಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು, ಸಂಜೆಯೊಳಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಒಟ್ಟು ಮತದಾರರ ಸಂಖ್ಯೆ 6,560. ಈ ಪೈಕಿ 3,176 ಪುರುಷರು ಹಾಗೂ 3,358 ಮಹಿಳೆಯರು ಸೇರಿ ಒಟ್ಟು 6,534 ಮಂದಿ ಮತ ಚಲಾಯಿಸಿದ್ದಾರೆ.

8 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಕಾಂಗ್ರೆಸ್‌ನಿಂದ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನಿಂದ ಎಸ್.ಪ್ರಕಾಶ್ ಶೆಟ್ಟಿ, ಪ್ರವೀಣ್‌ಚಂದ್ರ ಜೈನ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಜಯಪ್ರಕಾಶ್ ಹೆಗ್ಡೆ, ಹರಿಕೃಷ್ಣ ಬಂಟ್ವಾಳ, ಅಲ್ಫೋನ್ಸ್ ಫ್ರಾಂಕೊ, ಇಸ್ಮಾಯೀಲ್ ದೊಡ್ಡಮನೆ ಸ್ಪರ್ಧಾ ಕಣದಲ್ಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಮತ್ತು ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಾಗಿದ್ದು, ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಅಲ್ಫೋನ್ಸ್ ಫ್ರಾಂಕೊ ಕಣದಲ್ಲಿದ್ದಾರೆ. ಈ 8 ಮಂದಿ ಅಭ್ಯರ್ಥಿಗಳ ಭವಿಷ್ಯ ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ.

ಮತ ಎಣಿಕೆ ಹಿನ್ನೆಲೆ ವ್ಯಾಪಕ ಬಂದೋಬಸ್ತ್ :

ಮತ ಎಣಿಕೆ ನಡೆಯಲಿರುವ ಲೇಡಿಹಿಲ್‌ನ ವಿಕ್ಟೋರಿಯಾ ಪ್ರೌಢ ಶಾಲೆ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿವಿಲ್ ಪೊಲೀಸರ ಜತೆ 10 ತುಕಡಿ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಣೆಗೆ ನಿಯೋಜಿಸಲಾಗಿದೆ. ಸುಗಮ ಸಂಚಾರಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. 8 ಗಂಟೆಗೆ ಸರಿಯಾಗಿ ಎಣಿಕೆ ಪ್ರಕ್ರಿಯೆಗೆ ಆರಂಭಗೊಂಡಿದೆ.. ಸಂಜೆ 6 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತಾ ಎಲ್ಲ ಕ್ರಮಗಳನ್ನು ಕೈಗೊಂಡಿದೆ.

Vote_Counting_Start_2 Vote_Counting_Start_3 Vote_Counting_Start_4 Vote_Counting_Start_5 Vote_Counting_Start_6 Vote_Counting_Start_7 Vote_Counting_Start_8 Vote_Counting_Start_9

ಸಂಪೂರ್ಣ ವೀಡಿಯೊ ಚಿತ್ರೀಕರಣ :

ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಆಯುಧಗಳನ್ನು ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆಯ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣದ ಮೂಲಕ ದಾಖಲಿಸಿ ಕೊಳ್ಳಲಾಗುವುದು.

ನೇರ ಪ್ರಸಾರ :

ನಮ್ಮ ಕುಡ್ಲ, ವಿ4 ಕೇಬಲ್ ಚಾನೆಲ್‌ನಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಮತ ಎಣಿಕೆ ಫಲಿತಾಂಶ ಕಾರ್ಯದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ:

ಅಧಿಕಾರಿಗಳ ವಾಹನಗಳನ್ನುಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಮತ ಎಣಿಕೆ ಕೇಂದ್ರದ ಅವರಣದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿಲ್ಲ. ಅಭ್ಯರ್ಥಿಗಳು/ಏಜೆಂಟರು ಹಾಗೂ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ಮೈದಾನ, ಮಣ್ಣಗುಡ್ಡ ರಸ್ತೆಬದಿ ಹಾಗೂ ಹಿಂದಿ ಪ್ರಚಾರ ಸಭಾ ರಸ್ತೆ ಬದಿಯಲ್ಲಿ ಅವಕಾಶ ನೀಡಲಾಗಿದೆ.

ಹಂತ ಹಂತವಾಗಿ ಮತ ಎಣಿಕೆ:

ಭದ್ರತಾ ಕೊಠಡಿಗಳಿಂದ ತರಲಾಗುವ ಮತ ಪೆಟ್ಟಿಗೆಗಳನ್ನು 14 ಎಣಿಕೆ ಮೇಜುಗಳಿಗೆ ಹಂಚಿಕೆ ಮಾಡಲಾಗುವುದು. ಮತಪತ್ರಗಳನ್ನು ಲೆಕ್ಕ ಮಾಡಿ, ಮತದಾನವಾದ ಲೆಕ್ಕಾಚಾರವನ್ನು ಹೋಲಿಕೆ ಮಾಡಲಾಗುವುದು. ಬಳಿಕ ಮತ ಪೆಟ್ಟಿಗೆಯಿಂದ ಹೊರತೆಗೆದ ಮತಪತ್ರಗಳನ್ನು 25ರ ಕಟ್ಟುಗಳಾಗಿಸಿ ಎಣಿಕೆ ಕೇಂದ್ರದಲ್ಲಿ ಅಳವಡಿಸಿರುವ ಡ್ರಮ್ಮಿಗೆ ಹಾಕಲಾಗುವುದು.

ಈ ಪ್ರಕ್ರಿಯೆ ಪೂರ್ವಾಹ್ನ 11ರೊಳಗೆ ಪೂರ್ಣಗೊಂಡು ಬಳಿಕ ಕೆಲ ನಿಮಿಷಗಳ ವಿರಾಮದ ಬಳಿಕ ಮತಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಡ್ರಮ್ ಅಧಿಕಾರಿ ಮತಪತ್ರಗಳ ಕಟ್ಟುಗಳನ್ನು ಮಿಶ್ರಮಾಡಿ 25ರ 20 ಕಟ್ಟುಗಳನ್ನು ಪ್ರತಿ ಮತ ಎಣಿಕೆ ಮೇಜುಗಳಿಗೆ ನೀಡುವರು. ಅಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಪತ್ರಗಳನ್ನು ಮೇಜಿನಲ್ಲಿ ಅಳವಡಿಸಿರುವ ಅಭ್ಯರ್ಥಿವಾರು ಟ್ರೇಗಳಲ್ಲಿ ಹಾಕಲಾಗುತ್ತದೆ.

ಇದೇ ಸಂದರ್ಭ ನೋಟಾ ಮತ್ತು ತಿರಸ್ಕೃತ ಮತ ಹಾಗೂ ಅನುಮಾನಾಸ್ಪದ (ಮತ ಎಣಿಕೆ ಅಧಿಕಾರಿಗಳಿಗೆ ಸಂಶಯವಿರುವ ಮತಪತ್ರಗಳು) ಟ್ರೇಗಳಲ್ಲೂ ಸಂಬಂಧಪಟ್ಟ ಮತಪತ್ರಗಳು ಹಂಚಿಕೆಯಾಗುತ್ತವೆ. ಬಳಿಕ ತಿರಸ್ಕೃತ ಮತ, ನೋಟಾ ಮತಗಳ ಒಟ್ಟು ಸಂಖ್ಯೆಯನ್ನು ಚಲಾವಣೆಯಾದ ಒಟ್ಟು ಮತಗಳಿಂದ ಕಳೆದು ಉಳಿದ ಒಟ್ಟು ಮತಗಳ ಆಧಾರದಲ್ಲಿ ಕೋಟಾ ನಿರ್ಧಾರವಾಗುತ್ತದೆ. (ಉದಾ: ಚಲಾವಣೆಯಾದ ಒಟ್ಟು 6,534 ಮತಗಳಲ್ಲಿ 234 ತಿರಸ್ಕೃತ ಹಾಗೂ ಕೋಟಾ ಮತಗಳಾಗಿದ್ದಲ್ಲಿ ಉಳಿದ 6,300 ಮತಗಳ ಆಧಾರದಲ್ಲಿ ಕೋಟಾ ನಿರ್ಧರಿಸಲಾಗುತ್ತದೆ.)

Write A Comment