ಕನ್ನಡ ವಾರ್ತೆಗಳು

ಮುಷ್ಕರ ನಿರತರ ಟ್ಯಾಂಕರ್ ಚಾಲಕರ ಬಂಧನ : ಬಂಧಿತರ ಜೊತೆ ಪೊಲೀಸರಿಂದ ಅಮಾನವೀಯ ವರ್ತನೆ ಆರೋಪ

Pinterest LinkedIn Tumblr

Tanker_protes_photo_1

ಮಂಗಳೂರು,ಜ.02 : ಹೈದಾರಬಾದ್‌ನಲ್ಲಿ ಹತ್ಯೆಗೀಡಾದ ಅನಿಲ ಟ್ಯಾಂಕರ್ ಚಾಲಕ ಶರವಣ್ ಹತ್ಯೆಯ ಆರೋಪಿಗಳನ್ನು ಬಂಧಿಸಬೇಕು ಹಾಗೂ ಆತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಸುರತ್ಕಲ್ ಸಮೀಪದ ಬಾಳದಲ್ಲಿ ನಡೆಯುತ್ತಿದ್ದ ಮುಷ್ಕರಕ್ಕೆ ಅನಿರೀಕ್ಷಿತ ತಿರುವು ಪಡೆದಿದ್ದು, ಏಕಾಏಕಿ ದಾಳಿ ನಡೆಸಿರುವ ಪೊಲೀಸರು ಮುಷ್ಕರದಲ್ಲಿ ತೊಡಗಿದ್ದ ಸುಮಾರು 50 ಮಂದಿ ಟ್ಯಾಂಕರ್ ಚಾಲಕರನ್ನು ಬಂಧಿಸಿದ ಘಟನೆ ನಡೆದಿದೆ.

Protester_arst_1

ಬಂಧಿತರ ಜೊತೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಚಾಲಕರ ಪ್ರತಿಭಟನೆಗೆ ಡಿವೈಎಫ್ಐ, ಸಿಐಟಿಯು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ, ಮುಷ್ಕರದಲ್ಲಿ ಪಾಲ್ಗೊಂಡಿದ್ದ ಬಿ.ಕೆ. ಇಮ್ತಿಯಾಝ್, ಯೋಗೀಶ್ ಶೆಟ್ಟಿ ಜೆಪ್ಪು ನವೀನ್ ತಲಪಾಡಿ, ವಿಲ್ಲಿ ವಿಲ್ಸನ್, ಶರಣೇಶ್, ಪ್ರಕಾಶ್, ಬಸಪ್ಪ ಹೀಗೆ ಅನೇಕರನ್ನು ಬಂಧಿಸಿದ ಪೊಲೀಸರು ಠಾಣೆಯಲ್ಲಿರಿಸಿದ್ದು, ಅಪರಾಹ್ನ 3 ಗಂಟೆಯಾದರೂ ಆಹಾರ ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಠಾಣೆಯ ಹೆಡ್ ಕಾನ್ಸ್ ಟೇಬಲ್ ಹೊರತು ಪಡಿಸಿ ಇತರ ಯಾವುದೇ ಪೊಲೀಸರು ಠಾಣೆಗೆ ಭೇಟಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಅಂಗಿ ಬಿಚ್ಚಿ ಠಾಣೆಯಲ್ಲಿಯೂ ಪ್ರತಿಭಟನೆ ಮಾಡಿದ್ದಾರೆ.

Tanker_protes_photo_2

ಘಟನೆ ವಿವರ :

ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗ್ಯಾಸ್ ಟ್ಯಾಂಕರ್ ಚಾಲಕ ತಮಿಳುನಾಡಿನ ಸರವಣನ್ ಕುಟುಂಬಕ್ಕೆ ಹಾಗೂ ಗಂಭೀರ ಗಾಯಗೊಂಡಿರುವ ತಂಗರಾಜುರಿಗೆ ಪರಿಹಾರ ನೀಡಬೇಕು. ಟ್ಯಾಂಕರ್ ಚಾಲಕರಿಗೆ ಕಾನೂನಿನಂತೆ ಭದ್ರತೆ ಒದಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಡಿವೈಎಫ್ಐ ಮತ್ತು ಸಿಐಟಿಯು ನೇತೃತ್ವದಲ್ಲಿ ಟ್ಯಾಂಕರ್ ಚಾಲಕರು ಮಂಗಳವಾರದಿಂದ ಕಾನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಎಚ್‌ಪಿಸಿಎಲ್‌ನಿಂದ ಸರಬರಾಜು ಆಗಬೇಕಾಗಿದ್ದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಟ್ಯಾಂಕರ್ ಮಾಲಕರ ಸೂಚನೆ ಯಂತೆ ಕರ್ತವ್ಯಕ್ಕೆ ಹಾಜರಾಗಲು ಚಾಲಕರು ಹಿಂದೇಟು ಹಾಕಿದಾಗ ಸ್ವತಃ ಮಾಲಕರೇ ಇತರೆಡೆಗಳಿಂದ ಚಾಲಕರನ್ನು ಕರೆತಂದಿದ್ದರು. ಆದರೆ ಗ್ಯಾಸ್ ತುಂಬಿದ ಟ್ಯಾಂಕರ್‌ನ್ನು ಪ್ರತಿ ಭಟಕಾರರು ರಸ್ತೆ ಮಧ್ಯೆ ತಡೆಯುವ ಭೀತಿಯ ಹಿನ್ನೆಲೆಯಲ್ಲಿ ಮಾಲಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತ ಎಲ್ಲರನ್ನೂ ಬಂಧಿಸಿದರು. ಲಾರಿ ಮಾಲಕರು ಹಾಗೂ ಎಚ್‌ಪಿಸಿಎಲ್ ಕಂಪೆನಿಯು ಪೊಲೀಸ್ ರಕ್ಷಣೆಯೊಂದಿಗೆ ಸುಮಾರು 400ಕ್ಕೂ ಹೆಚ್ಚು ಟ್ಯಾಂಕರ್‌ಗಳು ಗ್ಯಾಸ್ ತುಂಬಿಸಿಕೊಂಡು ಹೊರ ರಾಜ್ಯಕ್ಕೆ ಸಂಚರಿಸಿದವು.

ಈ ಸಂದರ್ಭ ಡಿಸಿಪಿ ಕಾಂತರಾಜು, ಎಸಿಪಿ ಮದನ್ ಗಾಂವ್ಕರ್, ಸುರತ್ಕಲ್ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಪ್ರತಿಭಟನೆಗೆ ಸಂಬಂಧಿಸಿ ಬಂಧಿತ ಐವರು ಡಿವೈಎಫ್ಐ ಮತ್ತು ಸಿಐಟಿಯು ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

Write A Comment