ಕುಂದಾಪುರ: ಶಾಲಾ ಪ್ರವಾಸದ ಬಸ್ಸು ಹಾಗೂ ಪಿಕಪ್ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪ್ರವಾಸದ ಬಸ್ಸಿನಲ್ಲಿದ್ದ ನಾಲ್ವರು ಮಕ್ಕಳು ಹಾಗೂ ಪಿಕಪ್ ವಾಹನ ಚಾಲಕ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಕುಂಭಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕನ್ನುಕೆರೆ ನಿವಾಸಿ ರಿಯಾಜ್ ಅಪಘಾತದಲ್ಲಿ ಗಾಯಗೊಂಡ ಪಿಕಪ್ ವಾಹನ ಚಾಲಕರಾಗಿದ್ದು, ಪ್ರವಾಸದ ಬಸ್ಸಿನಲ್ಲಿದ್ದ ಗುಲ್ಬರ್ಗಾ ಗಾಣಗಾಪುರದ ಪ್ರೌಢಶಾಲೆ ವಿದ್ಯಾರ್ಥಿಗಳ ಪೈಕಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಘಟನೆ ವಿವರ: ಜನವರಿ 1 ರಂದು ಪ್ರವಾಸ ನಿಮಿತ್ತ ವಿವಿಧ ಸ್ಥಳಗಳಿಗೆ ತೆರಳಿ ಭಾನುವಾರ ಬೆಳಿಗ್ಗೆ ಮುರ್ಡೇಶ್ವರ ದರ್ಶನ ಮುಗಿಸಿ ಮಲ್ಪೆ ಬೀಚ್ ವೀಕ್ಷಣೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಶಾಲಾ ಪ್ರವಾಸ ಬಸ್ಸು ವೇಗದಿಂದ ಬಂದಿದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಎದುರು ಗಾಜು ಪುಡಿಪುಡಿಯಾಗಿದ್ದಲ್ಲದೇ, ಪಿಕಪ್ ವಾಹನವೂ ಜಖಂಗೊಂಡಿದೆ. ಬಸ್ಸು ವೇಗವಾಗಿ ಅಪ್ಪಳಿಸಿದ ಕಾರಣ ಪಿಕಪ್ ವಾಹನ ಡಿವೈಡರ್ ಏರಿತ್ತು.
ಬ್ಯಾರಿಗೇಟರ್ ಅಳವಡಿಸಿ: ವಾಹನ ಸವಾರರು
ಸ್ಥಳೀಯ ಭಾಗದಲ್ಲಿ ಹಲವು ಅಪಘಾತಗಳು ನಡೆಯುತ್ತಿದ್ದು ಸ್ಥಳೀಯ ಪ್ರದೇಶದಲ್ಲಿ ಡಿವೈಡರ್ ಇರುವ ಕಾರಣ ರಸ್ತೆಗೆ ಬ್ಯಾರಿಗೇಟರ್ ಅಳವಡಿಸುವುದರಿಂದ ವೇಗವಾಗಿ ಬರುವ ವಾಹನಗಳ ವೇಗ ನಿಯಂತ್ರಣ ಸಾಧ್ಯವಿದೆ. ಅಲ್ಲದೇ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಕಂಪೆನಿಯವರು ನಿತ್ಯ ರಸ್ತೆ ಬದಲಾವಣೆ ಮಾಡುತ್ತಿದ್ದು ಯಾವುದೇ ಸೂಚನಾ ಫಲಕಗಳ ಅಳವಡಿಕೆ ಮಾಡದೇ ಇತರೇ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಾಹನ ಸವಾರರನ್ನು ಹಾಗೂ ನಿತ್ಯ ಸಂಚರಿಸುವವರಿಗೂ ಇದು ಗೊಂದಲವನ್ನುಂಟು ಮಾಡುತ್ತಿದೆ. ಈ ಸಮಯದಲ್ಲಿ ಶಾಲಾ ಪ್ರವಾಸಗಳು ಜಾಸ್ಥಿಯಿರುವ ಕಾರಣ ಶೀಘ್ರವೇ ಈ ಭಾಗದಲ್ಲಿ ವ್ಯವಸ್ಥಿತ ಬ್ಯಾರಿಗೇಟರ್ ಅಳವಡಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.