ಬಂಟ್ವಾಳ, ಜ.4: ಮೂರು ಕಾರುಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯಲ್ಲಿ ಭಾನುವಾರ ನಡೆದಿದೆ.
ಕಲ್ಲಡ್ಕ ಕಡೆಯಿಂದ ಬಿ.ಸಿ. ರೋಡು ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ತೀರಾ ವಿರುದ್ಧ ದಿಕ್ಕಿನಿಂದ ಬಂದ ಡಸ್ಟರ್ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಫೋಕ್ಸ್ವೇಗನ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಫೋಕ್ಸ್ವೇಗನ್ಗೆ ಡಿಕ್ಕಿ ಹೊಡೆದು ನಿಂತಿದೆ. ಅದರ ಹಿಂಬದಿಯಿಂದ ಬರುತ್ತಿದ್ದ ಮಾರುತಿ 800 ಕಾರೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಈ ಸರಣಿ ಅಪಘಾತ ಸಂಭವಿಸಿದೆ.
ಘಟನೆಯಿಂದ ಮೂರು ವಾಹನಗಳೂ ಜಖಂಗೊಂಡಿದ್ದು, ಚಾಲಕ, ಪ್ರಯಾಣಿಕರೆಲ್ಲರೂ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.