( ಸಾಂಧರ್ಭಿಕ ಚಿತ್ರ) ಮ೦ಗಳೂರು ಜ.06: ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ಕಂಡುಬಂದಲ್ಲಿ ತಕ್ಷಣವೇ ಅವುಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 301 ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು. ವಾಹನಗಳ ತಪಾಸಣೆ ಸೇರಿದಂತೆ ಅಕ್ರಮವಾಗಿ ಮರಳು ಸಾಗಾಟ ಕಂಡುಬಂದಲ್ಲಿ ಸೂಕ್ತ ಕ್ರಮಜರುಗಿಸಬೇಕು. ಕೇರಳ ರಾಜ್ಯಕ್ಕೆ ಮರಳು ಸಾಗಾಣಿಕೆ ತಡೆಯಲು ನೇಮಿಸಲಾಗಿರುವ ವಿಶೇಷ ತನಿಖಾ ತಂಡವು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಅವರು ಸೂಚಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ನಾಗೇಂದ್ರಪ್ಪ ಅವರು ಸಭೆಯಲ್ಲಿ ಮಾತನಾಡಿ, 2015-16 ನೇ ಸಾಲಿನಲ್ಲಿ ನೇತ್ರಾವತಿ ನದಿಯಲ್ಲಿ 7 ಮತ್ತು ಗುರುಪುರ ನದಿಯಲ್ಲಿ 12 ಒಟ್ಟು 19 ಮರಳು ಬಾರ್‍ಸ್‌ಗಳನ್ನು ಗುರುತಿಸಲಾಗಿತ್ತು, ಸದರಿ ಮರಳು ಬಾರ್‍ಸ್‌ಗಳಲ್ಲಿ16 ಮರಳು ಬಾರ್‍ಸ್‌ಗಳಿಗೆ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದಿಂದ ಪರಿಸರ ವಿಮೋಚನಾ ಪತ್ರ ಪಡೆಯಲಾಗಿತ್ತು.
ಕರಾವಳಿ ನಿಯಂತ್ರಣ ವಲಯದಲ್ಲಿ ಗುರುತಿಸಿರುವ ಮರಳು ಬಾರ್‍ಸ್‌ಗಳಿಂದ ಮರಳು ತೆಗೆಯಲು 168 ಪರವಾನಿಗೆದಾರರಿಗೆ ಅನುಮತಿಯನ್ನು ನೀಡಲಾಗಿತ್ತು. ಇದುವರೆಗೆ ಜಿಲ್ಲೆಯಲ್ಲಿ 8,10,817 ಮೆ.ಟನ್‌ಗಳಷ್ಟು ಮರಳು ತೆಗೆದು ಸಾಗಾಣಿಕೆ ಮಾಡಲು ರಾಜಧನ ರೂ.464.864 ಲಕ್ಷ ಮತ್ತು ಆಡಳಿತಾತ್ಮಕ ಶುಲ್ಕ ರೂ.324.326 ಲಕ್ಷ ಪಾವತಿಸಿಕೊಂಡು ಪರವಾನಿಗೆ ನೀಡಲಾಗಿರುತ್ತದೆ ಎಂದು ತಿಳಿಸಿದರು.
2016-17 ನೇ ಸಲಿಗೆ ಮರಳು ತೆಗೆಯಲು ನೇತ್ರಾವತಿ ನದಿಯಲ್ಲಿ 6 ಹಾಗೂ ಗುರುಪುರ ನದಿಯಲ್ಲಿ 12 ಮರಳು ಬಾರ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ 242 ಪರವಾನಿಗೆ ನೀಡಲಾಗಿದ್ದು, ನಂತರ 651 ಅರ್ಜಿಗಳು ಪರವಾನಿಗೆಗೆ ಬಂದಿವೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.