ಕನ್ನಡ ವಾರ್ತೆಗಳು

ಆ್ಯಂಟನಿ ಸಂಸ್ಥೆ ಕರಾರಿನಂತೆ ಕೆಲಸ ಮಾಡಿಲ್ಲ : ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಸ್ಪಷ್ಟನೆ .

Pinterest LinkedIn Tumblr

Dupt_mayor_presmeet_1

ಮಂಗಳೂರು,ಜ.07 : ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಆ್ಯಂಟನಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸೆಲ್‌ ಪ್ರೈ. ಲಿ. ಸಂಸ್ಥೆಗೆ ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ 17.68ಕೋಟಿ ರೂ. ಪಾವತಿಸಿದ್ದು, ಕೇವಲ 2ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಅದನ್ನು ಕೂಡ ಮುಂದಿನ ಹದಿನೈದು ದಿನಗಳೊಳಗೆ ಪಾವತಿಸಲಾಗುವುದು ಎಂದು ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕರಾರಿನಂತೆ ಆ್ಯಂಟನಿ ಸಂಸ್ಥೆಯವರು ಕೆಲಸ ಮಾಡಿಲ್ಲ. ಯಾಂತ್ರೀಕೃತವಾಗಿ ರಸ್ತೆ, ಚರಂಡಿ, ಫೂಟ್‌ಪಾತ್‌ಗಳನ್ನು ಸ್ವಚ್ಛಗೊಳಿಸುವು ದಾಗಿ ಸಂಸ್ಥೆ ಒಪ್ಪಿಕೊಂಡಿದ್ದರೂ ಹೇಳಿದಂತೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬೀದಿಬದಿ, ಕಾಂಕ್ರಿಟ್‌ ರಸ್ತೆ ಗುಡಿಸುವುದನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಕೇವಲ ಡೋರ್-ಟು-ಡೋರ್ ತ್ಯಾಜ್ಯವನ್ನು ಸಂಸ್ಥೆ ಸಂಗ್ರಹಿಸುತ್ತಿದೆ. ಹುಲ್ಲು ಕಟಾವು ಮಾಡಿಲ್ಲ. ದೊಡ್ಡ ತೋಡುಗಳ ಸ್ವಚ್ಛತೆ ಹಾಗೂ ಬೀಚ್‌ ಸ್ವಚ್ಛಗೊಳಸದ ಕಾರಣದಿಂದ ಬಿಲ್‌ನಲ್ಲಿ ಕಡಿತ ಮಾಡಲಾಗಿದೆ. ಕಡಿತಗೊಳಿಸಿದ ಬಿಲ್‌ ಅನ್ನು ಸೇರಿಸಿ 10 ಕೋ.ರೂ. ಬಾಕಿ ಎಂದು ಕಂಪೆನಿಯವರು ಹೇಳುತ್ತಿರುವುದು ಸರಿಯಲ್ಲ ಎಂದು ಪುರುಷೋತ್ತಮ ಚಿತ್ರಾಪುರ ವಿವರಿಸಿದರು.

Dupt_mayor_presmeet_3 Dupt_mayor_presmeet_2

ಈ ವರ್ಷದ ನಿರ್ವಹಣೆ ಯೋಜನೆ ಪ್ರಸ್ತುತ ಪಡಿಸುವಂತೆ ಸಂಸ್ಥೆಗೆ ತಿಳಿಸಿದ್ದರೂ ಸಂಸ್ಥೆ ಅದನ್ನು ಐದು ತಿಂಗಳು ವಿಳಂಬಿಸಿದೆ. ಹಣ ಪಾವತಿ ಬಾಕಿ ಇರಿಸಿಕೊಂಡಿರುವುದಕ್ಕೆ ಇದೂ ಒಂದು ಕಾರಣ ಎಂದು ಪುರುಷೋತ್ತಮ ಹೇಳಿದರು.

ಮನಪಾವು ಈಗಾಗಲೇ ಒಟ್ಟು 20,41,46,804ರೂ.ಗಳಲ್ಲಿ 17,68,99,979.29ರೂ.ಗಳನ್ನು ಪಾವತಿಸಿದೆ. ಕೆಲಸದಲ್ಲಿನ ನ್ಯೂನತೆಗಾಗಿ 3,08,27,223ರೂ.ಗಳನ್ನು ಕಡಿತಗೊಳಿಸಲಾಗಿದೆ. ಈಗ ಕೇವಲ 2,04,08,596ರೂ. ಪಾವತಿಸಲು ಬಾಕಿ ಇದ್ದು ಅದನ್ನು ಪಾವತಿಸಲಾಗುತ್ತದೆ ಎಂದು ಚಿತ್ರಾಪುರ ವಿವರಿಸಿದರು.

ಮುಂದಿನ ಹದಿನೈದು ದಿನಗಳಲ್ಲಿ ಮನಪಾ, ಶಾಸಕರು ಮತ್ತು ಸಂಸ್ಥೆಯ ಎಂ.ಡಿ ಚರ್ಚೆ ನಡೆಸಲಿದ್ದು, ಈ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಇಂಥ ನ್ಯೂನತೆಗಳು ಪುನ: ಮರುಕಳಿಸಿದರೆ ಕಾನೂನು ರೀತ್ಯ ಕ್ರಮಕೈಗೊಳ್ಳುವುದು ಅನಿವಾರ್ಯವಾದೀತು. ಈಗಾಗಲೇ ಸಂಸ್ಥೆಗೆ ನಾವು ಮೂರು ಬಾರಿ ನೋಟೀಸ್ ನೀಡಿದ್ದೇವೆ ಎಂದು ಪುರುಷೋತ್ತಮ ಚಿತ್ರಾಪುರ ವಿವರಣೆ ನೀಡಿದ್ದಾರೆ.

ಮನಪಾ ಕಮಿಷನರ್ ಡಾ.ಎಚ್.ಎನ್.ಗೋಪಾಲಕೃಷ್ಣ, ಶಶಿಧರ ಹೆಗ್ಡೆ, ಕಾರ್ಪೊರೇಟರ್ ದೀಪಕ್ ಪೂಜಾರಿ ಮತ್ತಿತರರು ಸುದ್ದಿಗೋಷ್ಠಿ ಸಂದರ್ಭ ಉಪಸ್ಥಿತರಿದ್ದರು.

Write A Comment