ಕನ್ನಡ ವಾರ್ತೆಗಳು

ಬಿಜೆಪಿಗೆ ‘ಗುಡ್ ಬೈ’ ಹೇಳಿದ ಉಡುಪಿ ಜಿ.ಪಂ. ಶಿಕ್ಷಣ ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ (ಸಂದರ್ಶನ)

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಭಾರತೀಯ ಜನತಾಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಗೌರಿ ದೇವಾಡಿಗ ಅವರು ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದು 2005ರಲ್ಲಿ ಬಿಜೆಪಿಯಿಂದ ತಾಲ್ಲೂಕುಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಧಿಕ ಮತದಲ್ಲಿ ಗೆಲುವು ಸಾಧಿಸಿದ್ದು ಬಳಿಕ 2010ರಲ್ಲಿ ಜಿ.ಪಂ.ಗೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಜಿಲ್ಲಾಪಂಚಾಯತ್ ಸದಸ್ಯರಾಗಿ ವರ್ಷಗಳಿಂದೀಚೆಗೆ ಜಿ.ಪಂ. ಶಿಕ್ಷಣ ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕೆಲಸವನ್ನು ಮಾಡುತ್ತಿದ್ದರು.

Gouri Devadiga

ಗೌರಿ ದೇವಾಡಿಗರ ಬಗ್ಗೆ:
ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಗುರುತಿಸಿಕೊಂಡ ಗೌರಿ ದೇವಾಡಿಗ ಅವರು ಬಡವರ ಹಾಗೂ ಅಶಕ್ತರ ಸಮಸ್ಯೆಗಳಿಗೆ ಸ್ಪಂದಿಸಿದವರು, ತಮ್ಮ ಕ್ಷೇತ್ರದಲ್ಲಿ ಹಲವು ಅಭಿವ್ರದ್ಧಿ ಕಾರ್ಯಕ್ರಮಗಳಿಗೆ ತನ್ನ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಮತದಾರರಿಗೆ ಅನುಕೂಲವನ್ನು ಮಾಡಿಕೊಟ್ಟವರು. ಹದಿನೈದು ವರ್ಷಕ್ಕೂ ಅಧಿಕ ಬಿಜೆಪಿಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡು ಬೈಂದೂರು ಭಾಗದಲ್ಲಿ ‘ಗೌರಿಯಕ್ಕ’ ಎಂದೇ ಖ್ಯಾತರಾದವರು.

ರಾಜಿನಾಮೆ ಬಗ್ಗೆ ‘ಕನ್ನಡಿಗ ವರ್ಲ್ಡ್’ನೊಂದಿಗೆ ಮಾತನಾಡಿದ ಗೌರಿ ದೇವಾಡಿಗ ಅವರು ಮನದಾಳದ ಮಾತನ್ನು ಬಿಚ್ಚಿಟ್ಟರು.

ಬೆಲೆಯಿಲ್ಲದ ಕಡೆ ಇರಲ್ಲ: ಗೌರಿ ದೇವಾಡಿಗ
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳ ವರ್ತನೆ ಬೇಸರ ಮೂಡಿಸಿದೆ, ಪಕ್ಷದಲ್ಲಿ ನಿಷ್ಟೆ ಹಾಗೂ ಪ್ರಾಮಾಣಿಕವಾಗಿ ಗುರುತಿಸುವ ಕೆಲಸವಾಗುತ್ತಿಲ್ಲ, ನಮಗೆ ಬೆಲೆ ಸಿಗದ ಕಡೆ ಇರುವುದು ಸರಿಯಲ್ಲ, ಮುಂದೆ ಇದೇ ಪಕ್ಷದಲ್ಲಿದ್ದು ಜನಪರ ಕೆಲಸವನ್ನು ಮಾಡುವುದು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೆ.

ಮುಖಂಡರು ಮಾತನಾಡಿಲ್ಲ:
ಇನ್ನು ಬಿಜೆಪಿಗೆ ರಾಜಿನಾಮೆ ನೀಡುವ ವಿಚಾರ ಪಕ್ಷದ ಮುಖಂಡರಿಗೆ ತಿಳಿದರೂ ಕೂಡ ಈವರೆಗೂ ಬೈಂದೂರು ಕ್ಷೇತ್ರ ಮುಖಂಡರಾಗಲೀ, ಜಿಲ್ಲಾ ನಾಯಕರಗಲೀ ಯಾವುದೇ ಸಂಪರ್ಕವನ್ನೂ ಮಾಡಿಲ್ಲ, ಮಾತುಕತೆಯನ್ನೂ ನಡೆಸಿಲ್ಲ. ತುಂಬಾ ಆಲೋಚಿಸಿಯೇ ರಾಜಿನಾಮೆ ನಿರ್ಧಾರ ತೆಗೆದುಕೊಂಡಿದ್ದು ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಲ್ಲ.

ಕಾಂಗ್ರೆಸ್ ಪಕ್ಷ ಸೇರುವೆ:
ಬಿಜೆಪಿಯಲ್ಲಿ ಹಲವು ವರ್ಷಗಳ ಪ್ರಾಮಾಣಿಕ ಕೆಲಸ ಮನಸ್ಸಿಗೆ ತ್ರಪ್ತಿ ತಂದಿದೆ, ನನ್ನ ಜನಪರ ಕೆಲಸ ಎಲ್ಲರಿಗೂ ತಿಳಿದಿದೆ, ಪಕ್ಷ ಅದಕ್ಕೆ ಸ್ಪಂದಿಸಿ, ಸೂಕ್ತ ಸಹಕಾರ ನೀಡದಿದ್ದರೂ ಕೂಡ ಜನರು ನನ್ನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ರಾಜಕೀಯ ಜೀವನದಲ್ಲಿ ಹಣ ಮಾಡುವ ಉದ್ದೇಶ ನನ್ನದಲ್ಲ, ನನ್ನ ಕೈಯಲ್ಲಾದ ಸೇವೆ ಮಾಡುವುದು ನನ್ನ ಗುರಿ. ಕಾಂಗ್ರೆಸ್ ಪಕ್ಷದ ಮುಖಂಡರೂ ಪಕ್ಷ ಸೇರ್ಪಡೆಯಾಗಲೂ ಹಿಂದಿನಿಂದಲೂ ಆಹ್ವಾನಿಸಿದ್ದರು, ಮುಂದಿನ ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಚಿಂತನೆ ಮಾಡಿದ್ದೇನೆ. ನಿಷ್ಟಾವಂತರಿಗೆ ಕೆಲಸ ಮಾಡಲು ಯಾವ ಪಕ್ಷವಾದರೇನು?.

ಜಿ.ಪಂ. ಸ್ಪರ್ಧೆ ಖಚಿತ:
ಜಿಲ್ಲಾಪಂಚಾಯತ್ ಸ್ಪರ್ಧೆಗೆ ಟಿಕೇಟ್ ಆಕಾಂಕ್ಷಿಯಾಗಿರದಿದ್ದರೂ ಕೂಡ ಮುಖಂಡರ ಹಾಗೂ ಹಿತೈಷಿಗಳ ಕೋರಿಕೆಯಿಂದಾಗಿ ಸ್ಪರ್ಧಿಸುವ ಚಿಂತನೆ ಮಾಡಿದ್ದು ಖಂಬದಕೋಣೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವೆ, ಕಾಲೆಳೆಯುವ ಮಂದಿ ಎಷ್ಟೇ ಇದ್ದರೂ ನನ್ನ ಜನಪರ ಕೆಲಸ ನನ್ನನ್ನು ಗೆಲ್ಲಿಸಿಯೇ ಗೆಲ್ಲಿಸುತ್ತದೆ ಎಂಬ ಭರವಸೆ ಇದೆ.

ಒಟ್ಟಿನಲ್ಲಿ ಗೌರಿ ದೇವಾಡಿಗ ರಾಜಿನಾಮೆಯ ಹಿನ್ನೆಲೆ ಈ ಬಾರೀ ಜಿಲ್ಲಾಪಂಚಾಯತ್ ಚುನಾವಣೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಅವರ ಕ್ಷೇತ್ರದಲ್ಲಿ ಕುತೂಹಲವನ್ನುಂಟು ಮಾಡಿದೆ.

ಸಂದರ್ಶನ- ಯೋಗೀಶ್ ಕುಂಭಾಸಿ

Write A Comment