ಕನ್ನಡ ವಾರ್ತೆಗಳು

ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ಕ್ರೀಡಾಕೂಟ

Pinterest LinkedIn Tumblr

sports_day_photo

ಮ೦ಗಳೂರು,ಜ.08: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ೩ ನೇ ವಾರ್ಷಿಕ ಕ್ರೀಡಾಕೂಟ ಸುರತ್ಕಲ್ ಎನ್.ಐ,ಟಿ.ಕೆ. ಕ್ರೀಡಾಂಗಣದಲ್ಲಿ ಇಂದು ಚಾಲನೆಗೊಂಡಿತು.

ಕ್ರೀಡಾಕೂಟವನ್ನು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಲಿನ್ಯವನ್ನು ನಿಯಂತ್ರಿಸಿ ಪರಿಸರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಗಳಿಗೆ ಈ ಕ್ರೀಡಾಕೂಟವು ಮಾನಸಿಕ ಹಾಗೂ ಶಾರೀರಿಕ ಬಲವನ್ನು ನೀಡಲಿದೆ ಎಂದು ಹೇಳಿದರು.

ಪರಿಸರವು ಜಾಗತಿಕ ಚರ್ಚಾ ವಿಚಯವಾಗಿದೆ. ಪರಿಸರ ರಕ್ಷಣೆಯಲ್ಲಿ ಯಾವುದೇ ಕಾರಣಕ್ಕೆ ರಾಜಿ ಸಲ್ಲದು. ಮುಂದಿನ ಭವಿಷ್ಯದ ರಕ್ಷಣೆಯ ದೃಷ್ಠಿಯಲ್ಲಾದರೂ, ನಾವು ಈ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಶಾಸಕ ಮೊಹಿದೀನ್ ಬಾವಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಅನೇಕ ಪ್ರಮುಖ ಕ್ರೀಡಾ ಕೂಟಗಳು ನಡೆಯುತ್ತಿರುವುದು ಸಂತಸದ ವಿಷಯ. ಇದರಿಂದ ಜಿಲ್ಲೆಯ ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಬಹುದು. ಜಿಲ್ಲೆಯಲ್ಲಿರುವ ಕೈಗಾರಿಕೆ, ಬೃಹತ್ ಉದ್ದಿಮೆಗಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಉದಾರವಾಗಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್. ಶಾಂತಪ್ಪ ಸ್ವಾಗತಿಸಿದರು. ಮಂಡಳಿಯ ಸದಸ್ಯ ಕಾವೇರಿಯಪ್ಪ, ಎನ್.ಐ.ಟಿ.ಕೆ ಡೀನ್ ಉದಯಕುಮಾರ್ ಯರಗಟ್ಟಿ, ಉದ್ಯಮಿ ನಝೀರ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ವಂದಿಸಿದರು.

ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಜಿಲ್ಲೆಗಳ ಸುಮಾರು ೭೦೦ ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದಾರೆ.

Write A Comment