ಕನ್ನಡ ವಾರ್ತೆಗಳು

ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆಗೆ ಕ್ರಮಕೈಗೊಳ್ಳಿ- ಸೊರಕೆ ಖಡಕ್ ವಾರ್ನಿಂಗ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಆಧಿಕಾರಿಗಳು ಈಗಿನಿಂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.

ಅವರು ಉಡುಪಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ವರ್ಷ ನೀರಿನ ಸಮಸ್ಯೆ ಕಂಡುಬಂದಿದ್ದ ಗ್ರಾಮಗಳಲ್ಲಿ , ಈಗಾಗಲೇ ರೂಪಿಸಿರುವ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಗಿಸುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಡ್ರೀಮ್ಡ್ ಫಾರೆಸ್ಟ್ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕಾಗಿರುವುದರಿಂದ, ಡ್ರೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿನ ಜನವಸತಿ ಪ್ರದೇಶಗಳನ್ನು ಈಗಿನಿಂದಲೇ ಗುರುತಿಸಿ, ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ತಾಲೂಕು ವ್ಯಾಪ್ತಿಯಲ್ಲಿನ ರಸ್ತೆಗಳ ಕಾಮಗಾರಿ ಮತ್ತು ದುರಸ್ತಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದರು.

Sorake_Programme_Udp (3) Sorake_Programme_Udp (2) Sorake_Programme_Udp (1)

ಇಲಾಖಾ ಅಧಿಕಾರಿಗಳು ಗ್ರಾಮ ಸಭೆಗಳಲ್ಲಿ ಭಾಗವಹಿಸಿ, ತಮ್ಮ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವಂತೆ ಹಾಗೂ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ, ಸವಲತ್ತುಗಳನ್ನು ಶೀಘ್ರದಲ್ಲಿ ವಿತರಿಸುವಂತೆ ಸೂಚಿಸಿದರು.

೯೪ ಸಿ ಯೋಜನೆಯಲ್ಲಿ ಉಡುಪಿ ತಾಲೂಕಿನಲ್ಲಿ 7562 ಅರ್ಜಿ ಸ್ವೀಕಾರ ಮಾಡಿದ್ದು, 6063 ಅರ್ಜಿಗಳನ್ನು ತನಿಖೆ ಮಾಡಿ, ಈಗಾಗಲೇ 368 ಮಂದಿಗೆ ತಾತ್ಕಾಲಿಕ ಮತ್ತು 62 ಮಂದಿಗೆ ಖಾಯಂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ , ಕೆಲವು ಅರ್ಜಿಗಳು ಕುಮ್ಕಿ, ಪರಂಬೋಕು ಮತ್ತು ಗೋಮಾಳ ವ್ಯಾಪ್ತಿಗೆ ಒಳಪಡುತ್ತಿದ್ದು, ಬಾಕಿ ಅರ್ಜಿಗಳ ಪರಿಶೀಲನೆ ನಡೆದಿದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಸಭೆಯಲ್ಲಿ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕ ಕರ್ನೇಲಿಯೋ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿ.ಪ್ರಸನ್ನ , ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜನಾರ್ಧನ ಉಪಸ್ಥಿತರಿದ್ದರು.

Write A Comment