ಮಂಗಳೂರು,ಜ.10: “ಅಮ್ಮ”ಅಮೃತಾನಂದಮಯಿ ಅವರಲ್ಲಿ ಭಕ್ತರು ಭಗವಂತನನ್ನು ಕಾಣುತ್ತಾರೆ.. ಅಂತಾರಾಷ್ಟ್ರೀಯ ಮಟ್ಟದವರೆಗೆ ಖ್ಯಾತಿಯನ್ನು ಪಡೆದ ಅವರು ಅಧ್ಯಾತ್ಮದ ಜತೆ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ವಿಶಿಷ್ಟವಾದ ಗೌರವಕ್ಕೆ ಪಾತ್ರರಾಗಿದ್ದಾರೆ. ಸದಭಿರುಚಿ, ಸತ್‌ಚಿಂತನೆ, ಸದಾಶಯಗಳನ್ನು ಜಾಗೃತಗೊಳಿಸುತ್ತಿದ್ದಾರೆ. ಅವರ ದಿವ್ಯಾಲಿಂಗನ ದರ್ಶನವು ತಾಯಿಯ ಮಮತೆಯಂ ತಿದ್ದು ಭಕ್ತರಲ್ಲಿ ಆತ್ಮವಿಶ್ವಾಸವನ್ನು ಸುರಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ನಗರದ ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ಶನಿವಾರ ಸದ್ಗುರು ಮಾತಾ ಶ್ರೀ ಅಮೃತಾನಂದಮಯಿ ಅವರನ್ನು ಸಮ್ಮಾನಿಸಿ ಮಾತನಾಡಿದರು.
ಮಾತಾ ಅಮೃತಾನಂದಮಯಿ ಅವರ ಸತ್ಸಂಗವು ಭಜನೆ, ಸಂಕೀರ್ತನೆ, ಧ್ಯಾನ ಸಹಿತವಾಗಿದ್ದು ಭಕ್ತರಲ್ಲಿ ಅಧ್ಯಾತ್ಮದ ಭಾವನೆ, ಮಾರ್ಗದರ್ಶನ ಮಹಿಳೆಯರ ಸ್ವಾವಲಂಬನೆಗೆ ಸ್ಫೂರ್ತಿಯಾಗಿದ್ದಾರೆ. ಅಮೃತಾನಂದಮಯಿ ಮಠದ ಶಿಕ್ಷಣ ಸಂಸ್ಥೆಗಳು ಅತ್ಯಾಧುನಿಕವಾಗಿದ್ದು ವಿಶೇಷ ಕೊಡುಗೆಗಳೆಂದು ಅವರು ವಿಶ್ಲೇಷಿಸಿದರು.
ಕೋಟ್ಯಂತರ ಮಂದಿಯ ಗೌರವ, ಅಭಿಮಾನ, ಪ್ರೀತಿಯನ್ನು ಹೊಂದಿರುವ ಅಮೃತಾನಂದಮಯಿ ಅವರು ಹೆಮ್ಮೆಯ, ಮಮತೆಯ ಅಮ್ಮನಾಗಿದ್ದಾರೆ. ಅವರಿಂದ ಸಮಾಜಕ್ಕೆ ಮತ್ತಷ್ಟು ಮಾರ್ಗದರ್ಶನ ದೊರೆಯು ವಂತಾಗಲಿ ಎಂದು ಹಾರೈಸಿದ ಹೆಗ್ಗಡೆ ಅವರು ಅಮೃತಾನಂದಮಯಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನವೇ ನೆಮ್ಮದಿಯ ಬದುಕು ಎಂದು ಅವರು ವ್ಯಾಖ್ಯಾನಿಸಿದರು.
ಅಮೃತಾನಂದಮಯಿ ಮಠಧಿದಿಂದ ವಿವಿಧ ಸವಲತ್ತುಗಳನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಫಲಾನುಭವಿಗಳಿಗೆ ವಿತರಿಸಿದರು.
ಸಚಿವ ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ.ಆರ್. ಲೋಬೊ ಮತ್ತು ಐವನ್ ಡಿ’ಸೋಜಾ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಲತಾ ಸಾಲ್ಯಾನ್, ಮಂಗಳಾಮೃತ ಚೈತನ್ಯ, ಮಾಲಾಡಿ ಅಜಿತ್ ಕುಮಾರ್ ರೈ, ಡಾ.ಎಂ. ಶಾಂತಾರಾಮ ಶೆಟ್ಟಿ, ಮನೋಹರ ಪ್ರಸಾದ್, ಎಚ್. ಕುಮಾರ್, ಎನ್.ಕೆ. ಸಿಂಗ್, ಗಣೇಶ್ ರಾವ್, ಪ್ರದೀಪ್ ಕಲ್ಕೂರ, ಪ್ರಕಾಶ್ ಶೆಟ್ಟಿ, ಅಶೋಕ್ ಕುಮಾರ್, ಅಶೋಕನ್, ಶ್ರೀನಿವಾಸ ದೇಶಪಾಂಡೆ ಮುಖ್ಯ ಅತಿಥಿಗಳಾಗಿದ್ದರು.
ಡಾ. ಸನತ್ ಹೆಗ್ಡೆ, ಡಾ. ಜೀವರಾಜ ಸೊರಕೆ, ಮಾಧವ ಸುವರ್ಣ, ಮಂಜುನಾಥ ರೇವಣಕರ್, ಸುಗುಣನ್, ಡಾ. ದೇವದಾಸ್ ಮುಂತಾದವರು ಉಪಸ್ಥಿತರಿದ್ದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷೆ ಶ್ರುತಿ ಹೆಗ್ಡೆ ಸ್ವಾಗತಿಸಿದರು. ವಾಮನ ಕಾಮತ್ ವಂದಿಸಿದರು. ಡಾ.ಅಶೋಕ್ ಶೆಟ್ಟಿ ನಿರೂಪಿಸಿದರು.