ಕನ್ನಡ ವಾರ್ತೆಗಳು

ಮೊಬೈಲ್ ರಕ್ಷಣೆಗೆ ಹಣ ಖರ್ಚು ಮಾಡುವ ಮಂದಿ ಮೆದುಳು ರಕ್ಷಣೆಯ ಹೆಲ್ಮೆಟ್‌ಗೆ ಹಣ ಖರ್ಚು ಮಾಡಲ್ಲ; ರಾಜೇಶ್ ಕೆ.ಸಿ

Pinterest LinkedIn Tumblr

ಕುಂದಾಪುರ: ಮನುಷ್ಯನ ಮೆದುಳನ್ನು ತಿನ್ನುವ ಮೊಬೈಲ್ ರಕ್ಷಣೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಯುವ ಸಮೂಹ ಬೆಲೆ ಕಟ್ಟಲಾಗದ ಮೆದುಳಿನ ರಕ್ಷಣೆ ಮಾಡುವ ಹೆಲ್ಮೆಟ್‌ಗಾಗಿ ಖರ್ಚು ಮಾಡಲು ಆಲೋಚಿಸುತ್ತಾರೆ. ಚಾಲನೆಯ ವೇಳೆಯಲ್ಲಿ ಮೊಬೈಲ್‌ನಿಂದ ಮಾತನಾಡುವುದರಿಂದ ನನ್ನ ಜತೆ ಪ್ರಯಾಣಿಸುವವರ ಹಲವರ ಪ್ರಾಣಗಳಿಗೆ ಕುತ್ತು ಬರುತ್ತದೆ ಎನ್ನುವ ಅರಿವು ಚಾಲಕರಲ್ಲಿ ಮೂಡಿದರೆ ಇದರಿಂದ ಉಂಟಾಗುವ ಅಪಾಯಗಳು ಕಡಿಮೆಯಾಗುತ್ತದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಹೇಳಿದ್ದಾರೆ.

ಅವರು ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಭಾನುವಾರ ಬೆಳಿಗ್ಗೆ ಸಂಚಾರಿ ಪೊಲೀಸ್ ಠಾಣಾ ವತಿಯಿಂದ ನಡೆದ 27 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಾಲನಾ ಪರವಾನಿಗೆ ಇಲ್ಲದೆ ವಾಹನ ಓಡಿಸುವ ಚಾಲಕರು ಓಡಿಸುವ ವಾಹನಗಳ ಮಾಲಿಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡಾಗ ಹದಿ ಹರಯದವರಿಂದ ಉಂಟಾಗುವ ವಾಹನ ದುರಂತಗಳನ್ನು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದರು.

Kundapura_Traffic_Programme (2) Kundapura_Traffic_Programme (6) Kundapura_Traffic_Programme (3) Kundapura_Traffic_Programme (8) Kundapura_Traffic_Programme (7) Kundapura_Traffic_Programme (1) Kundapura_Traffic_Programme (5) Kundapura_Traffic_Programme (4)

ಕುಂದಾಪುರ ಉಪವಿಭಾಗದ ಡಿವೈ‌ಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಕಾನೂನು ಪಾಲನೆ ಪ್ರತಿಯೊಬ್ಬ ಸಾರ್ವಜನಿಕನ ಕರ್ತವ್ಯವಾಗಿದೆ, ಜಾಗೃತ ಸಮಾಜದ ಪ್ರತಿಯೊಬ್ಬರೂ ಕಾನೂನು ಪಾಲನೆಯ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವುದರಿಂದ ಅಪಘಾತಗಳಿಂದ ಉಂಟಾಗುವ ಹಾನಿಗಳಲ್ಲಿ ಒಂದಷ್ಟು ಅಂಶಗಳನ್ನು ತಡೆಯಲು ಸಾಧ್ಯ. ವಾಹನದ ಚಾಲಕರಲ್ಲಿ ಎಚ್ಚರಿಕೆಯ ಮನಸ್ಥಿತಿಗಳು ಇದ್ದಲ್ಲಿ ಹಾಗೂ ಮನುಷ್ಯನ ಪ್ರಾಣ ಅತ್ಯಮೂಲ್ಯವಾದುದು ಎನ್ನುವ ಚಿಂತನೆಗಳು ಇದ್ದಾಗ ಅತಿರೇಖದ ಅಪಘಾತಗಳು ಕಮ್ಮಿಯಾಗುತ್ತದೆ. ನ್ಯಾಯಾಲಯಗಳು ಇತ್ತೀಚಿನ ದಿನಗಳಲ್ಲಿ ಅಪಘಾತಗಳಿಂದ ಉಂಟಾಗುವ ಹಾನಿಗಳನ್ನು ತಡೆಯಲು ಕೆಲವೊಂದು ಕಟ್ಟು ನಿಟ್ಟಾದ ಆದೇಶಗಳನ್ನು ನೀಡಿದೆ. ಅದನ್ನು ಪಾಲಿಸ ಬೇಕಾದ ಅನೀವಾರ್ಯತೆ ಪೊಲೀಸ್ ಇಲಾಖೆಗೆ ಇದೆ. ಜನರನ್ನು ವಿಶ್ವಾಸದಿಂದ ಕಾಣುವ ಹಾಗೂ ಪ್ರಯಾಣಿಕರ ವಿಶ್ವಾಸಾಹರ್ತೆಯನ್ನು ಉಳಿಸಿಕೊಳ್ಳುವ ರಿಕ್ಷಾ ಚಾಲಕರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಹೇಳಿದರು.

ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ, ಎಸ್.ಐ ಗಳಾದ ದೇವೇಂದ್ರ, ದೇವರಾಜ್, ನಾಸೀರ್ ಹುಸೇನ್ ಹಾಗೂ ವಾಹನ ಚಾಲಕರ ಹಾಗೂ ಮಾಲಕರ ಸಂಘ(ಇಂಟಕ್)ದ ಅಧ್ಯಕ್ಷ ಲಕ್ಷಣ ಶೆಟ್ಟಿ ವೇದಿಕೆಯಲ್ಲಿದ್ದರು.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಯ ಸ್ವಾಗತಿಸಿ, ನಿರೂಪಿಸಿದರು.

Write A Comment