ಕನ್ನಡ ವಾರ್ತೆಗಳು

ತಂದೆ ಮತ್ತು ಪುತ್ರಿ ಆತ್ಮಹತ್ಯೆಗೆ ಶರಣು.

Pinterest LinkedIn Tumblr

father_doutr_susced

ಮೂಲ್ಕಿ, ಜ.11: ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ್ದ ನಿಡ್ಡೋಡಿ ನಿವಾಸಿಯೋರ್ವರು ತನ್ನ ನಾಲ್ಕು ವರ್ಷದ ಪುತ್ರಿಯನ್ನು ಬೆನ್ನಿಗೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ನಿಡ್ಡೋಡಿಯ ಮಂಜ ನಿವಾಸಿ ಹಾಲಿ ಫಲಿಮಾರು ಗ್ರಾಮದ ಅವರಾಲುಮಟ್ಟು ಸಾನದ ಮನೆ ಎಂಬಲ್ಲಿ ವಾಸವಿದ್ದ ದಿವಾಕರ ಚಂದ್ರ ಪೂಜಾರಿ (35) ಮತ್ತು ಪುತ್ರಿ ಧೃತಿ ಯಾನೆ ಚೆನ್ನಿ (4) ಮೃತ ದುರ್ದೈವಿಗಳು.

ದಿವಾಕರ ಪೂಜಾರಿ ಅವರ ಪತ್ನಿ ದೇವಿಕಾ ಅವರಾಲುಮಟ್ಟುವಿನರಾಗಿದ್ದು, ಐದು ವರ್ಷಗಳ ಹಿಂದೆ ಅವರ ಮದುವೆ ನೆರೆವೇರಿತ್ತು. ದಂಪತಿಗೆ ಏಕೈಕ ಪುತ್ರಿಯಾಗಿದ್ದ ಧೃತಿ ಯಾನೆ ಚೆನ್ನಿ ಪಡುಬಿದ್ರಿಯ ಸಾಗರ ವಿದ್ಯಾಮಂದಿರದಲ್ಲಿ ಎಲ್‍ಕೆಜಿ ವಿದ್ಯಾರ್ಥಿನಿಯಾಗಿದ್ದಳು.

ನಿಡ್ಡೋಡಿಯಲ್ಲಿ ದುರ್ಗಾ ಸೌಂಡ್ಸ್ ಸಂಸ್ಥೆಯನ್ನು ಹೊಂದಿದ್ದು, ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಅವರಿಗೆ ಪತ್ನಿ ಸ್ವಸಹಾಯ ಸಂಘ ಮತ್ತು ನಂದಿಕೂರು ಕಾರ್ಪೋರೇಶನ್ ಬ್ಯಾಕಿನಿಂದ ಸಾಲ ತೆಗೆದು ಹಣ ನೀಡಿದ್ದರು. ಇತ್ತೀಚಿಗೆ ವ್ಯವಹಾರದಲ್ಲಿ ನಷ್ಟದಿಂದಾಗಿ ಮತ್ತೂ ಆರ್ಥಿಕ ಅಡಚಣೆಯಲ್ಲಿದ್ದ ದಿವಾಕರ ಪತ್ನಿಯಲ್ಲಿ ಹಣ ಕೇಳಿದ್ದರಾದರೂ ಆಕೆಯು ಹಣ ನೀಡುವ ಸ್ಥಿತಿಯಲ್ಲಿರಲಿಲ್ಲ. ಹಣದ ಮುಗ್ಗಟ್ಟಿನಿಂದ ಮನನೊಂದಿದ್ದ ದಿವಾಕರ ಮುಂಬೈಯಲ್ಲಿರುವ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರೆನ್ನಲಾಗಿದೆ.

ಗುರುವಾರ ಸಂಜೆ ಶಾಲೆಯ ಬಸ್ಸಿನಲ್ಲಿ ಮನೆಗೆ ಬಂದಿದ್ದ ಮಗಳನ್ನು ದಿವಾಕರ ತನ್ನ ಜೀಪಿನಲ್ಲಿ ನಿಡ್ಡೋಡಿಯ ಮನೆಗೆ ಕರೆದೊಯ್ದಿದ್ದರು. ಆದರೆ ಪತ್ನಿಗಾಗಲೀ, ಮನೆಯವರಿಗಾಗಲೀ ಈ ವಿಷಯ ತಿಳಿಸಿರಲಿಲ್ಲ. ಶುಕ್ರವಾರ ಬೆಳಿಗ್ಗೆ ನಿಡ್ಡೋಡಿಯಿಂದ ಮೂಲ್ಕಿಗೆ ಬಂದು ಬಪ್ಪನಾಡು ದೇವಳದ ಬಳಿ ಜೀಪ್ ನಿಲ್ಲಿಸಿ ಪುತ್ರಿಯೊಂದಿಗೆ ತೆರಳಿದ್ದರು.

ದೇವಿಕಾ ಮತ್ತು ಮನೆಯವರು ಎರಡು ದಿನಗಳಿಂದ ಹುಡುಕಾಟ ನಡೆಸಿದ್ದರು. ತಂದೆ-ಮಗಳು ಪತ್ತೆಯಾಗಿರಲಿಲ್ಲ. ನಿನ್ನೆ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಪ್ಪನಾಡು ಬಡಗ ಹಿತ್ಲು ಜಳಕದ ಕಟ್ಟೆ ಬಳಿ ಶಾಂಭವಿ ನದಿಯ ದಂಡೆಯಲ್ಲಿ ತಂದೆ-ಮಗಳ ಶವಗಳು ಪತ್ತೆಯಾಗಿವೆ. ದಿವಾಕರ ಬಟ್ಟೆಯಿಂದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತ ಪಟ್ಟಿದೆ.

ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment