ಮಂಗಳೂರು : ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ವಾಗುತ್ತಿದ್ದು, ಯುದ್ಧದಲ್ಲಿ ಮೃತ ಹೊಂದುವವರಿಗಿಂತ ರಸ್ತೆ ಅಪಘಾತಕ್ಕೆ ಹೆಚ್ಚು ಜನ ಬಲಿಯಾಗುತ್ತಿದ್ದಾರೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಜಯರಾಂ ಭಟ್ ಅವರು ಹೇಳಿದ್ದಾರೆ.
ದ.ಕ.ಸಾರಿಗೆ ಇಲಾಖೆ ಹಾಗೂ ದ.ಕ.ಪೊಲೀಸ್ ಇಲಾಖೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಂಗಳವಾರ ನಗರದ ಪೊಲೀಸ್ ಸಭಾಭವನದ ಅಯೋಜಿಸಲಾದ 27 ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಹನ ಸವಾರರು ಆರ್. ಟಿ.ಓ ನಿಯಮಗಳನ್ನು ಸರಿಯಗಿ ಪಾಲಿಸದಿರುವುದು ಕೂಡ ಅಪಘಾತಕ್ಕೆ ಒಂದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ವಾಹನ ಚಾಲನಾ ಪರವಾನಿಗೆ ಪಡೆಯುವಾಗ ಪ್ರಾದೇಶಿಕ ಸಾರಿಗೆ ಇಲಾಖೆ ನೀಡುವ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿ ವಾಹನ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ ಎಂದು ಹೇಳಿದರು.
ಉಪಸಾರಿಗೆ ಆಯುಕ್ತ ಜಿ.ಎಸ್ ಹೆಗ್ಡೆ ಪ್ರಾಸ್ತಾವನೆಗೈದರು. ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಮಾಡುವ ನಿಟ್ಟಿನಲ್ಲಿ ಚಾಲಕರ ಸುರಕ್ಷತೆಗಾಗಿ ಸರಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು. ಪ್ರತೀ ವರ್ಷ ವಾಹನ ನೊಂದಣಿ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ವಾಹನ ಚಾಲಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಹೆಗ್ಡೆ ಹೇಳಿದರು.
ಸಂಚಾರ ನಿಯಮಗಳ ವಿಷಯದಲ್ಲಿ ಸಾರ್ವಜನಿಕರು ಸಾರಿಗೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಸಂಚಾರ ಸುಗಮವಾಗಬೇಕಾದರೆ ಅನವಶ್ಯಕವಾಗಿ ಹಾರ್ನ್ ಹಾಕುವುದನ್ನು ನಿಲ್ಲಿಸಬೇಕು.ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತಾಡಬಾರದು. ಮಾತ್ರವಲ್ಲದೇ ಟ್ರಾಫಿಕ್ ಪೊಲೀಸರು ಕೂಡ ಸಂಚಾರವನ್ನು ನಿಯಂತ್ರಿಸುವ ಸಂದರ್ಭ ಮೊಬೈಲ್ ಫೋನ್ ಗಳಲ್ಲಿ ಸಂಭಾಷಣೆ ನಿರತರಾಗುತ್ತಿರುವುದು ಕಂಡುಬರುತ್ತಿದೆ, ಇಂಥಹ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಜಯರಾಂ ಭಟ್ ಅವರು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಿದರು. ಎಸ್ಪಿ ಡಾ. ಶರಣಪ್ಪ ಎಸ್.ಡಿ, ಡಿಸಿಪಿ ಶಾಂತರಾಜು, (ಕಾನೂನು ಮತ್ತು ಸುವ್ಯವಸ್ಥೆ), ಡಿಸಿಪಿ ಡಾ.ಸಂದೀಪ್ ಎಂ.ಪಾಟೀಲ್, ( ಅಪರಾಧ) ಇವರು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಡಿಸಿಪಿ ಡಾ.ಸಂದೀಪ್ ಎಂ.ಪಾಟೀಲ್, ( ಅಪರಾಧ) ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಕೆ.ಎನ್.ನಾರಾಯಣ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.