ಕುಂದಾಪುರ/ಬೆಂಗಳೂರು: ಎಲ್ಲೆಡೆ ನಡೆಯುತ್ತಿದ್ದ ಹನಿ ಟ್ರಾಪಿಂಗ್ ಪ್ರಕರಣಗಳಂತೆ ಇದೀಗಾ ಬೆಂಗಳೂರು ಸೇರಿದಂತೆ ಕರಾವಳಿಯನ್ನು ಬೆಚ್ಚಿಬೀಳಿಸಿದ ಪ್ರಕರಣವೇ ಲವರ್‍ಸ್ ಟ್ರಾಪಿಂಗ್. ಹೌದು ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಅವರ ಬಳಿ ಪೊಲೀಸರಂತೆ ವರ್ತಿಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಇವರ ಪೈಕಿ ಓರ್ವ ಕುಂದಾಪುರ ಮೂಲದವನಾಗಿದ್ದು ತಾಲೂಕಿನ ತೆಕ್ಕಟ್ಟೆ ತೋಟದಬೆಟ್ಟು ನಿವಾಸಿ ಗಣೇಶ್ ಮೊಗವೀರ(30), ಜೆ.ಪಿ. ನಗರ ಮೂಲದ ಲಕ್ಷ್ಮಣ ಬಂಧಿತ ಆರೋಪಿಗಳು.
ಹುಡುಗೀರೇ ಇವನ ಟಾರ್ಗೇಟ್:
ಉಡುಪಿ ಮೂಲದ ಗಣೇಶ್ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದವನು. ಆದರೇ ಈಸಿಯಾಗಿ ಹಣ ಮಾಡೋ ದುರಾಲೋಚನೆ ಮಾಡಿದ್ದೇ ಆತ ಕಂಡುಕೊಂಡ ದಾರಿಯೇ ನಕಲಿ ಪೊಲೀಸ್. ತಾನೊಬ್ಬ ಸಿ.ಸಿ.ಬಿ.ಪೊಲೀಸ್ ಎಂದು ಹೇಳಿಕೊಂಡು ಪಾರ್ಕಿನಲ್ಲಿ ಕೂರುತ್ತಿದ್ದ ಪ್ರೇಮಿಗಳ ಬಳಿ ಬಂದು ‘ತಾನು ಪೊಲೀಸ್, ನಿಮ್ಮ ಲವ್ ವಿಚಾರವನ್ನು ಮನೆಯವರ ಬಳಿ ಹೇಳಬೇಕಾಗುತ್ತದೆ, ಬೇಡ ಎಂದಾದರೇ ನಿಮ್ಮ ಬಳಿ ಇರುವ ಹಣ ಒಡವೆ ನೀಡಿ’ ಎಂದು ಬೆದರಿಕೆ ಹಾಕುತ್ತಿದ್ದ. ಈತನ ಮಾತಿಗೆ ಹೆದರುವ ಹುಡುಗಿಯರೇ ಈತನ ಟಾರ್ಗೇಟ್. ಅವರನ್ನು ಬೆದರಿಸಿ ವಂಚಿಸೋದೇ ಈತನ ಖತರ್ನಾಕ್ ಬ್ಯುಸಿನೆಸ್ ಆಗಿತ್ತು. ಈತನ ಈ ಎಲ್ಲಾ ಚಟುವಟಿಕೆಗಳಿಗೆ ಲಕ್ಷ್ಮಣ್ ಸಾಥ್ ನೀಡುತ್ತಿದ್ದ.
ಈತನ ಕಾಟವನ್ನು ತಾಳಲಾರದೇ ಯಾವುದೇ ಯುವತಿಯೋರ್ವಳು ಜಯನಗರ ಪೊಲೀಸರೆದುರು ತನ್ನ ಕಷ್ಟ ಹೇಳಿಕೊಂಡು ದೂರು ಕೊಟ್ಟಿದ್ದಾಳೆ. ಈಕೆ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇಬ್ಬರನ್ನು ಹುಡುಕಿ ಬೆಂಡೆತ್ತಿದ್ದಾರೆ. ಆರೋಪಿಗಳಿಂದ 11 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ಭಾಗದಲ್ಲಿ ಮೊದಲಾದೆಡೆ 11 ಯುವತಿಯರನ್ನು ಬೆದರಿಸಿ ಸುಲಿಗೆ ಮಾಡಿರುವ ಬಗ್ಗೆ ಆರೋಪಿ ಪೊಲೀಸರ ಬಳಿ ಒಪ್ಪಿಕೊಂಡಿದ್ದು ಆತನಿಂದ 30ಕ್ಕೂ ಅಧಿಕ ಮೊಬೈಲ್ ಸಿಮ್ ಕಾರ್ಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.