ಕನ್ನಡ ವಾರ್ತೆಗಳು

ಪಟಾಕಿ ದಾಸ್ತಾನು : ಮನೆಗೆ ಆಕಸ್ಮಿಕ ಬೆಂಕಿ – ಮಹಿಳೆಗೆ ಗಾಯ

Pinterest LinkedIn Tumblr

fire

ಮಂಗಳೂರು, ಜ.13: ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಗ್ಯಾಸ್ ಸಿಲಿಂಡರ್ ಕೂಡ ಸ್ಫೋಟಗೊಂಡು ಮಹಿಳೆಯೋರ್ವರು ಗಾಯಗೊಂಡ ಘಟನೆ ಬಜ್ಪೆ ಸಮೀಪದ ಅಡ್ಕವಾರೆ ಕೋರಕಂಬ್ಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಸ್ಫೋಟದಿಂದಾಗಿ ಮನೆಯ ಗೋಡೆಗಳು ಕುಸಿದು ಬಿದ್ದು ಸಾಮಗ್ರಿಗಳು ಧ್ವಂಸಗೊಂಡಿದ್ದು, ಸುಮಾರು ಐದು ಲಕ್ಷ ರೂ.ಗಳ ನಷ್ಟವನ್ನು ಅಂದಾಜಿಸಲಾಗಿದೆ.

ಅಡ್ಕಬಾರೆ ಕೋರಕಂಬ್ಳ ನಿವಾಸಿ ಸಿರಾಜ್ ಅಹ್ಮದ್ ಎನ್ನುವವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಡಿ ಸಾಹೇಬರು ಎಂದೇ ಹೆಸರಾಗಿರುವ ಸಿರಾಜ್ ಅಹ್ಮದ್ ಜಾತ್ರೆ , ಕೋಲ ಇತ್ಯಾದಿ ಕಡೆಗಳಿಗೆ ಪಟಾಕಿಗಳನ್ನು ಪೂರೈಸುತ್ತಿದ್ದು, ಮನೆಯ ಕೋಣೆಯಲ್ಲಿ ಅವುಗಳನ್ನು ದಾಸ್ತಾನಿರಿಸಿದ್ದರು. ನಿನ್ನೆ ರಾತ್ರಿ 7.30ರ ಸುಮಾರಿಗೆ ಈ ಪಟಾಕಿಗಳ ದಾಸ್ತಾನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಫೋಟ ಸಂಭವಿಸಿದೆ. ಬೆಂಕಿಯಿಂದಾಗಿ ಗ್ಯಾಸ್ ಸಿಲಿಂಡರ್ ಸಹ ಸ್ಫೋಟಗೊಂಡಿದೆ. ಮನೆಯ ಗೋಡೆ ಕುಸಿದು ಬಿದ್ದಿದ್ದು, ಶಾಹಿನಾ (35) ಎನ್ನುವವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯ ಛಾವಣಿ ಕೂಡ ಕುಸಿದಿದೆ.

ಸ್ಫೋಟದಿಂದ ಬೆದರಿದ ಮನೆಮಂದಿ ಜೀವರಕ್ಷಣೆಗಾಗಿ ಹೊರಗೋಡಿದ್ದು, ಮನೆಯಲ್ಲಿ ಕಪ್ಪು ಹೊಗೆ ತುಂಬಿಕೊಂಡಿತ್ತು. ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment