ಮಂಗಳೂರು, ಜ. 19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಆರ್ಲಪದವು:
ಪುತ್ತೂರು-ಪಾಣಾಜೆ ರಸ್ತೆಯ ಆರ್ಲಪದವಿನಲ್ಲಿ ನಿನ್ನೆ ಪೆರ್ಲದಿಂದ ಬರುತ್ತಿದ್ದ ಖಾಸಗಿ ಬಸ್ಸು ಪೆರ್ಲದತ್ತ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ, ಕಾಸರಗೋಡು ಜಿಲ್ಲೆಯ ವಾಣಿನಗರ ಎಡಮಲೆ ನಿವಾಸಿ ಐತಪ್ಪ ನಾಯ್ಕ (24) ಎನ್ನುವವರು ಗಂಭೀರವಾಗಿ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರು ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರೆನ್ನಲಾಗಿದೆ.
ಸಂಪ್ಯ:
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ರವಿವಾರ ಸಂಜೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಸಂಪ್ಯ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮಾಡ್ನೂರು ಗ್ರಾಮ ಕಾವು ತೋಟದ ಮೂಲೆ ನಿವಾಸಿ ಗುರುವ (60) ಎನ್ನುವವರಿಗೆ ಹಿಂದಿನಿಂದ ವೇಗವಾಗಿ ಬಂದ ಜೀಪ್ ಡಿಕ್ಕಿ ಹೊಡೆದಿತ್ತು.
ಪರಿಣಾಮ ರಸ್ತೆಗೆಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.ಜೀಪ್ ಚಾಲಕ ಶ್ರೀಧರ ಎಂಬಾತನ ಅತಿವೇಗ ಹಾಗೂ ಅಜಾಗ್ರತೆಯ ಚಾಲನೆ ಈ ದುರಂತಕ್ಕೆ ಕಾರಣವೆನ್ನಲಾಗಿದೆ.
ಕಂಬಳಬೆಟ್ಟು ಜಂಕ್ಷನ್:
ಕಂಬಳಬೆಟ್ಟು ಜಂಕ್ಷನ್‌ನಲ್ಲಿ ನಡೆದ ಜೀಪು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಜಂಕ್ಷನ್‌ನಲ್ಲಿ ಸೋಮವಾರ ನಡೆದಿದೆ. ಕೇಪು ಗ್ರಾಮದ ಅಡ್ಯನಡ್ಕ ನಿವಾಸಿ ರೂಪೇಶ್ (28) ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಇವರು ಸೋಮವಾರ ಬೆಳಿಗ್ಗೆ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಂಬಳಬೆಟ್ಟು ಜಂಕ್ಷನ್‌ನಲ್ಲಿ ಪುತ್ತೂರು ಕಡೆಯಿಂದ ಬಂದ ಜೀಪು ಡಿಕ್ಕಿ ಹೊಡೆದಿದೆ. ಘಟನೆ ತೀವ್ರತೆಗೆ ಸವಾರ ರಸ್ತೆಗೆಸೆಯಲ್ಪಟ್ಟು ಕಾಲಿಗೆ ಹಾಗೂ ಕೈಗೆ ತೀವ್ರ ಸ್ವರೂಪದ ಗಾಯವಾಗಿದೆ. ಬಳಿಕ ಅವರನ್ನು 108 ವಾಹನ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎರಡು ಪ್ರಕರಣಗಳು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.