ಕುಂದಾಪುರ: ಶನಿವಾರದ ಆ ಸಂಜೆ ವಕ್ವಾಡಿಯಲ್ಲಿ ಸಾಂಸ್ಕ್ರತಿಕ ಕಲರವವೇ ಏರ್ಪಟ್ಟಿತ್ತು. ವೇದಿಕೆಯಲ್ಲಿದ್ದ ಸಿನೆಮಾ ತಾರೆಯರು ಇನ್ನಷ್ಟು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದ್ರು. ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ವಾರ್ಷಿಕೋತ್ಸವ ಸಂಭ್ರಮದ ಒಂದು ಝಲಕ್ ಇದು.
ವಕ್ವಾಡಿ ಫ್ರೆಂಡ್ಸ್ ಬಗ್ಗೆ:
ಹೌದು ಸುಮಾರು ಹತ್ತು ವರ್ಷಗಳಿಂದ ವಿವಿಧ ಸಕ್ರೀಯ ಚಟುವಟಿಕಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯನ್ನೇ ಗುರಿಯಾಗಿಸಿಕೊಂಡು ಬಂದ ಸಂಸ್ಥೆ ವಕ್ವಾಡಿ ಪ್ರೆಂಡ್ಸ್ ವಕ್ವಾಡಿ. ರಕ್ತದಾನ, ಅಶಕ್ತರಿಗೆ ನೆರವು, ಬಡವರಿಗೆ ಸಹಾಯ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವನಮಹೋತ್ಸವ ಸೇರಿದಂತೆ ಊರಿನ ಹತ್ತು ಹಲವು ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಂತು ದಿಟ್ಟ ಹೆಜ್ಜೆಯ ಮೂಲಕ ಮನೆಮಾತಾಗಿದೆ. ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ವಿ.ಕೆ. ಮೋಹನ್ ವಕ್ವಾಡಿ ಸೇರಿದಂತೆ ಹಲವು ದಾನಿಗಳ ಸಹಕಾರದಲ್ಲಿ ಈ ಸಂಸ್ಥೆ ತನ್ನ ಕೈಯಲ್ಲಾದಷ್ಟು ಪರೋಪಕಾರವನ್ನು ಸಮಾಜಕ್ಕೆ ನೀಡಿದ್ದು ಊರಿನ ಅಭ್ಯುದಯಕ್ಕೆ ಕೊಡುಗೆಯನ್ನು ನೀಡಿದೆ.
ಚಿತ್ರ ತಾರೆಯರ ಮೆರುಗು:
ಈ ಬಾರಿ ವಾರ್ಷಿಕೋತ್ಸವನ್ನು ಆಯೋಜಿಸಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೂ ಪ್ರೋತ್ಸಾಹ ನೀಡಿ ವೇದಿಕೆಯನ್ನು ರಂಗು ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಒಂದು ಉನ್ನತ ಹೆಜ್ಜೆಯನ್ನು ಇಟ್ಟಿದ್ದು ಶನಿವಾರ ವಕ್ವಾಡಿಯ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು ರಾಜಕೀಯ ಧುರೀಣರು ಸಾಕ್ಷಿಯಾದ್ರು. ಸಿನೆಮಾ ನಟಿಯರಾದ ತಾರಾ, ಆಂದ್ರೀತಾ ರೇ, ಟಿವಿ ನಿರೂಪಕಿ ಅನುಶ್ರೀ, ಹಾಸ್ಯ ಲೋಕದ ದಿಗ್ಗಜ ಸಾಧುಕೋಕಿಲ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ರು. ‘ಎಲ್ಲರೂ ಕಾಂಬ್ಕೆ ಸಾಪ್ ಇದ್ರಿ’ ಎನ್ನುವ ಮೂಲಕ ಕುಂದಗನ್ನಡದಲ್ಲಿ ಮಾತಿಗಿಳಿದ ಐಂದ್ರಿತಾ ರೇ ಎಲ್ಲರ ಚಪ್ಪಾಳೆ ಗಿಟ್ಟಿಸಿದ್ರು, ಅಲ್ಲದೇ ಕುಂದಾಪುರ ಖಾದ್ಯಗಳ ಬಗ್ಗೆತನಗಿರುವ ಆಸೆಯನ್ನು ವ್ಯಕ್ತಪಡಿಸಿದ್ರು. ತಾರಾ ವಕ್ವಾಡಿಯ ಹಳೆಯ ನಂಟಿನ ಬಗ್ಗೆ ನೆನೆಸಿಕೊಂಡಿದ್ದಲ್ಲದೇ ಉಡುಪಿ, ಕುಂದಾಪುರ ಹಾಗೂ ದಕ್ಷಿಣ ಕನ್ನಡ ಭಾಗದ ಜನರ ಸರಳ, ಸಜ್ಜನಿಕೆಯನ್ನು ಕೊಂಡಾಡಿದ್ರು. ಅನುಶ್ರೀ ಅವರಂತೂ ತನ್ನ ನಿರೂಪಣ ಶೈಲಿಯಲ್ಲಿ ‘ನಮಸ್ಕಾರ ವಕ್ವಾಡಿ’ ಎಂದಿದ್ದು ಜನರಲ್ಲಿ ಇನ್ನಷ್ಟು ಜೋಶ್ ಹುಟ್ಟಿಸಿತ್ತು. ಹಾಸ್ಯ ಕಲಾವಿದ ಸಾಧುಕೋಕಿಲರಂತೂ ತಮ್ಮ ಹಾಸ್ಯದ ಡೈಲಾಗ್ ಪಂಚ್ ಗಳ ಮೂಲಕ ನೆರೆದ ಅಭಿಮಾನಿಗಳ ಸಿಳ್ಳೆ ಚಪ್ಪಾಳೆ ಗಿಟ್ಟಿಸಿದ್ದಲ್ಲದೇ ನೆರದವರನ್ನು ನಗೆಗಡಲಲ್ಲಿ ತೇಲಿಸಿದ್ರು. ಅವರು ಹಾಡಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಸಾಂಗಿಗೆ ಅಭಿಮಾನಿಗಳು ಫುಲ್ ಫಿದಾ ಆದರು. ಕಾರ್ಯಕ್ರಮದಲ್ಲಿ ಟಿವಿ೯ ಖ್ಯಾತಿಯ ಹಳ್ಳಿಕಟ್ಟೆ ಕಲಾವಿದರ ಹಾಸ್ಯದ ಕಚಗುಳಿ ಜನರನ್ನು ನಕ್ಕುನಲಿಸಿತ್ತು, ಇನ್ನು ವಿವಿಧ ಕಲಾವಿದರ ಡ್ಯಾನ್ಸ್, ಹಾಡುಗಳು ಹಾಗೂ ಸಾಸ್ತಾನ ತಂಡದವರ ನಾಟಕ ಪ್ರೇಕ್ಷಕರನ್ನು ರಂಜಿಸಿತ್ತು.
ಉದ್ಘಾಟನೆ:
ಕಾರ್ಯಕ್ರಮವನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ವಕ್ವಾಡಿ ಪ್ರೆಂಡ್ಸ್ ಕಾರ್ಯವೈಖರಿ ಬಗ್ಗೆ ಪ್ರಶಂಶಿಸಿದ ಅವರು ದಾನಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ವಿ.ಕೆ. ಮೋಹನ್ ಅವರ ಊರಿನ ನಂಟು ಹಾಗೂ ಊರಿಗೆ ನೀಡಿದ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಇದು ಎಲ್ಲರಿಗೂ ಮಾದರಿಯಾಗಬೇಕೆಂದು ಆಶಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಿ.ಕೆ. ಮೋಹನ್, ಕಾಳಾವರ ಗ್ರಾಮಪಂಚಾಯತ್ ಅಧ್ಯಕ್ಷ ರವಿರಾಜ್ ಶೆಟ್ಟಿ, ಸದಸ್ಯ ಸತೀಶ್ ಪೂಜಾರಿ, ಕೆದೂರು ಸ್ಪೂರ್ತಿಧಾಮದ ಮುಖ್ಯಸ್ಥ ಕೇಶವ ಕೋಟೇಶ್ವರ, ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ಅಧ್ಯಾಪಕ ವಕ್ವಾಡಿ ವೇಣುಗೋಪಾಲ್ ಹೆಗ್ಡೆ, ವಕ್ವಾಡಿ ಪ್ರೆಂಡ್ಸ್ ವಕ್ವಾಡಿಯ ಅಧ್ಯಕ್ಷ ಜಗದೀಶ್ ಆಚಾರ್ಯ ಮೊದಲಾದವ್ರು ಸಮಾರಂಭದ ವೇದಿಕೆಗೆ ಕಳೆ ನೀಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ವಕ್ವಾಡಿ ಗ್ರಾಮದ ಪ್ರತಿಭೆ ಸಚಿನ್ ಗುಡಿಗಾರ್, ನಾನೂರು ಮೀಟರ್ ಹರ್ಡಲ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಕ್ವಾಡಿಯ ದೇವಿಕಾ ಶೆಟ್ಟಿ ಇವರನ್ನು ಸನ್ಮಾನಿಸಲಾಯ್ತು, ಅಲ್ಲದೇ ಸ್ಥಳೀಯ ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಊಟ, ಗಾಳಿ ಬೆಳಕನ್ನು ನೆನೆದಾಗ ಮೊದಲು ನೆನಪಿಗೆ ಬರುವುದು ನಾವು ಹುಟ್ಟಿದ ಮನೆ, ಬೆಳೆದ ಮನೆ, ಹುಟ್ಟೂರು. ಹಾಗೆಯೇ ಎಲ್ಲರಿಗೂ ಹುಟ್ಟೂರಿನ ಬಗ್ಗೆ ಅಭಿಮಾನ ಕಾಳಜಿ ಇರಬೇಕು. ಶಿಸ್ತು, ನೀತಿ, ನಿಯಮ ಆಚಾರ-ವಿಚಾರವನ್ನು ದಕ್ಷಿಣಕನ್ನಡ ಉಡುಪಿ ಜನರಿಂದ ತಿಳಿಯಬೇಕು. ಇಲ್ಲಿನ ದೇವಸ್ಥಾನ, ಅತಿಥ್ಯ, ಊಟೋಪಚಾರ, ಜನರ ನಗು-ಪ್ರೀತಿಗೆ ನನ್ನ ದೊಡ್ಡ ಸಲಾಂ.
– ತಾರಾ(ಖ್ಯಾತ ನಟಿ)
ಕುತ್ತೇ, ಸಾಧು ಮಹರಾಜ್ ಭೋಲೋ…, ಇದು ತೋಳಲ್ಲಲೇ ತೊಲೆ..! ಎನ್ನುತ್ತಾ ಮಾತು ಆರಂಭಿಸಿದ ಸಾಧು ಹೆದ್ದಾರಿ ಬಗ್ಗೆ ಏನಂದ್ರು ಗೊತ್ತಾ?
ಕಾರಿಗೆ ಸೈಕಲ್ ಅಡ್ಡಬಂತೆಂದು ಈಚೆ ತಿರುಗಿಸಿದ್ರೇ ಲಾರಿ ಅಡ್ಡಕ್ಕೆ ಬರುತ್ತೆ, ಹೇಗೆ ಚಲಾಯಿಸಬೇಕೋ ತಿಳಿಯುವುದಿಲ್ಲ. ಎಂದು ಹೆದ್ದಾರಿ ಕೆಲಸ ಸಂಪೂರ್ಣವಾಗುತ್ತದೆ ಎನ್ನುವುದು ಯಾರಿಗಾದರೂ ಗೊತ್ತಿದ್ದರೇ ಹೇಳಿ. ಇನ್ನು ಹತ್ತುಇಪ್ಪತ್ತು ವರ್ಷ ಆದ್ರೂ ಈ ಹೆದ್ದಾರಿ ಕಾಮಗಾರಿ ಪೂರ್ಣವಾದ ಮೇಲೆಯೇ ಈ ಕಡೇ ಬರುವೆ ಎಂದರು. ಇನ್ನು ರಸ್ತೆ ಅಪಘಾತವಾದಾಗ ಗಾಯಾಳುವನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿ ಎಂದು ಜನರಿಗೆ ತಿಳುವಳಿಕೆಯನ್ನು ಹೇಳಿದರು. ನಮ್ಮೂರು. ನಮ್ಮ ಜನ ಸಂತಸವಾಗಿರಬೇಕೆಂದು ಇಷ್ಟು ಅದ್ಧೂರಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿನ ಜನರು ತಾಳ್ಮೆಯಿಂದ ವರ್ತಿಸುತ್ತಾರೆ. ಈ ಊರಿನಲ್ಲಿ ಹುಡುಗಿಯರು ಹುಡುಗರಿಗಿಂತ ನೋಡಲು ಸುಂದರವಾಗಿದ್ದಾರೆ ಇದರ ಮರ್ಮವೇನು? ನನಗೆ ಕುಂದಾಪುರದ ಆಹಾರ ಖಾದ್ಯಗಳು ತುಂಬಾನೇ ಇಷ್ಟ.
– ಐಂದ್ರಿತಾ ರೇ (ಚಿತ್ರ ನಟಿ)
ವಕ್ವಾಡಿ ಜನರ ತಾಳ್ಮೆ, ಎನರ್ಜಿ ನೋಡಿ ಖುಷಿಯಾಗಿದೆ. ಇಂದಿನ ಕಾರ್ಯಕ್ರಮದಲಿ ಭಾಗವಹಿಸಿದ್ದು ಖುಷಿಯಾಗಿದೆ.
– ಅನುಶ್ರೀ (ಟಿವಿ ನಿರೂಪಕಿ)
ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಇದನ್ನೂ ಓದಿರಿ: ಸಾಧುಕೋಕಿಲ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿದ್ದೇನು?