ಕನ್ನಡ ವಾರ್ತೆಗಳು

ನಿವೇಶನ ರಹಿತರಿಗೆ ವಸತಿ ಯೋಜನೆ : ಶೀಘ್ರದಲ್ಲೇ ಶಕ್ತಿ ನಗರದಲ್ಲಿ 800 ಮನೆ ನಿರ್ಮಾಣ

Pinterest LinkedIn Tumblr

South_mla_meet_1

ಮಂಗಳೂರು: ಆಶ್ರಯ ಯೋಜನೆಯಡಿ 800 ಮಂದಿ ಬಡವರಿಗೆ ವಸತಿ ಸಮುಚ್ಛಯ ನಿರ್ಮಿಸುವ ಯೋಜನೆ ಹಾಕಿದ್ದು, ಇದಕ್ಕಾಗಿ ಶಕ್ತಿನಗರದಲ್ಲಿ 4 ರಿಂದ 8 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಅವರು ಮಾಹಿತಿ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ನಿವೇಶನ ರಹಿತರಿಗೆ ಅಲ್ಲಿ 800 ಮನೆಗಳನ್ನು ನಿರ್ಮಿಸಲಾಗುವುದು. ಅಲ್ಲಿ ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಬಹುಮಹಡಿ ಕಟ್ಟಡಗಳಲ್ಲಿ ನಿವೇಶನಗಳನ್ನು ಒದಗಿಸಲಾಗುವುದು. ಮುಂದಿನ ಎರಡು ವರ್ಷದೊಳಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.

South_mla_meet_2 South_mla_meet_3

ಈ ಯೋಜನೆಯ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರದ ಮಂಜೂರಾತಿಗೆ ಅರ್ಜಿ ಸಲ್ಲಿಸಿದೆ. ಮುಂದಿನ 18 ತಿಂಗಳೊಳಗೆ 800 ನಿವೇಶನಗಳು ಬಡವರಿಗೆ ಸಿಗಲಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ವಸತಿ ಒದಗಿಸಲು ಸುಮಾರು ಎರಡು ಸಾವಿರ ಅರ್ಜಿಗಳು ಬಂದಿವೆ. ಅರ್ಹರಿಗೆ ವಸತಿ ನೀಡಲಾಗುವುದು. ಪ್ರತಿ ಫ್ಲ್ಯಾಟ್‌ಗೆ 5 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. ಇಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ, ಪಾರ್ಕ್‌ ಹೀಗೆ ಸುಸಜ್ಚಿತವಾಗಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶವಿದ್ದು ನಿವೇಶನ ರಹಿತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಒಟ್ಟು 5 ಲಕ್ಷ ರೂ.ಗಳಲ್ಲಿ 3 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. ಪರಿಶಿಷ್ಟ ಜಾತಿ, ಪಂಗಡದವರು 50 ಸಾವಿರ ರೂ.ಗಳನ್ನು ಸಾಲದ ರೂಪದಲ್ಲಿ ಬ್ಯಾಂಕ್‌ನಲ್ಲಿ ಪಡೆದು ನೀಡಬೇಕಾಗುತ್ತದೆ. ಉಳಿದವರು 1.30 ಲಕ್ಷ ರೂ.ಗಳನ್ನು ಬ್ಯಾಂಕ್‌ನಿಂದ ಪಡೆದು ನೀಡಬೇಕಾಗುತ್ತದೆ. ಉಳಿದ ಮೊತ್ತವನ್ನು ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಯ ನಾನಾ ಅನುದಾನಗಳಿಂದ ಬಳಸಲಾಗುವುದು ಎಂದು ಲೋಬೋ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಅರುಣ್ ಕುವೆಲ್ಲೋ, ಪ್ರಮುಖರಾದ ವಿಶ್ವಾಸ್ ದಾಸ್, ಬಲ್‌ರಾಜ್ ರೈ ಮುಂತಾದವರು ಉಪಸ್ಥಿತರಿದ್ದರು.

Write A Comment