ಮಂಗಳೂರು, ಜ.27: ಮಂಗಳೂರು ಸಹಿತ ರಾಜ್ಯದ 13 ನಗರಗಳ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೆಎಸ್ಆರ್ಟಿಸಿಯಿಂದ ಹಂತಹಂತವಾಗಿ ಪ್ರಯಾಣಿಕರಿಗೆ ಉಚಿತ ವೈ-ಫೈ ಸೇವೆ ಆರಂಭಗೊಳ್ಳಲಿದೆ. ಇಷ್ಟೊಂದು ಕಡೆ ಏಕಕಾಲದಲ್ಲಿ ಉಚಿತ ವೈ-ಫೈ ಸೇವೆ ಆರಂಭ ದೇಶದಲ್ಲಿ ಇದೇ ಪ್ರಥಮವಾಗಿದೆ.
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಮತ್ತು ಉಳಿದ ವರು ಈ ಸೇವೆ ಪಡೆಯಲು ಅರ್ಹರಾಗಿದ್ದಾರೆ. ಈ ಮೂಲಕ ಸುಮಾರು ಒಂದು ಲಕ್ಷ ಮಂದಿ ಈ ಉಚಿತ ಸೇವೆ ಪಡೆಯಲಿದ್ದಾರೆ. ಈಗ ಎಲ್ಲ 13 ನಗರಗಳಲ್ಲಿ ಯಾವುದೇ ಷರತ್ತುಗಳಿಲ್ಲದೆ ಒಂದು ತಾಸು ಅಥವಾ 100 ಎಂಬಿಗಳಷ್ಟು ಉಚಿತ ಸೇವೆ ಪಡೆಯಬಹುದು.
ಆರಂಭದಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರಿನ ಬಸ್ ನಿಲ್ದಾಣ ಮತ್ತು ಶಾಂತಿ ನಗರದ ಬಸ್ ನಿಲ್ದಾಣದಲ್ಲಿ ವೈ-ಫೈ ಸೇವೆ ಪರಿಚಯಿಸಲಾಗಿತ್ತು. ಉಳಿದಂತೆ ಹಂತಹಂತವಾಗಿ ಹಾಸನ, ಮಂಗಳೂರು, ಮಡಿಕೇರಿ, ಧರ್ಮಸ್ಥಳ, ದಾವಣಗೆರೆ, ಕುಂದಾಪುರ, ಶಿವಮೊಗ್ಗ, ಹರಿಹರ, ಚಿಕ್ಕಮಗಳೂರು, ಮಂಡ್ಯ ಮತ್ತು ತುಮಕೂರಿನ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಆರಂಭವಾಗಲಿದೆ ಎಂದು ಕೆಎಸ್ಆರ್ಟಿಸಿ ವಿಶ್ವಸನೀಯ ಮೂಲವೊಂದು ತಿಳಿಸಿದೆ.