ಮಂಗಳೂರು : ಒಳಚರಂಡಿ, ಶೌಚಗುಂಡಿಗಳ ಸೌಚ್ಛತೆ ಕಾರ್ಯವನ್ನು ಮಾನವರಿಂದ ಮಾಡಿಸುವುದು ಸಂಪೂರ್ಣ ನಿಷೇಧವಾಗಿದ್ದರೂ ಮಂಗಳೂರಿನಲ್ಲಿ ಮಾತ್ರ ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ.
ಮ್ಯಾನ್ ಹೋಲ್ ಗಳನ್ನು ಕಾರ್ಮಿಕರಿಂದ ಖಾಲಿ ಮಾಡಿಸಬಾರದು ಎಂಬ ಆದೇಶವಿದ್ದರೂ ಕಾನೂನಿಗೆ ಬೆಲೆಯೇ ಇಲ್ಲದಂತಾಗಿದೆ. ಅದಕ್ಕೊಂದು ಸ್ಪಷ್ಟ ನಿರ್ದಶನ ಇಂದು ಮುಂಜಾನೆ ನಗರದ ಹೃದಯ ಭಾಗದ ಸ್ಟೇಟ್‌ಬ್ಯಾಂಕ್ ಬಳಿ ಇರುವ ಶೌಚಾಲಯ ಗುಂಡಿಗಿಳಿದು ಕಾರ್ಮಿಕರೊಬ್ಬರು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ, ಸಾವಿರಾರು ಜನ ಓಡಾಡುವ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆ ಬಳಿಯ ಪಕ್ಕದಲ್ಲೇ ಇರುವ ಸುಲಭ ಶೌಚಾಲಯದ ಗುಂಡಿಗೆ ಕಾರ್ಮಿಕನನ್ನು ಇಳಿಸಿದ ಗುತ್ತಿಗೆದಾರರು ಮ್ಯಾನ್ ಹೋಲ್ ಶುಚಿ ಮಾಡಿಸುತ್ತಿರುವ ದೃಶ್ಯ ಕಂಡು ಬಂದಿದೆ.
ರಾಜ್ಯದಲ್ಲಿ ಮಲಹೊರುವ ಪದ್ಧತಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಆ ಪದ್ಧತಿಯ ಒಂದು ಭಾಗವಾಗಿರುವ ಶೌಚ ಗುಂಡಿಗಳ ಸ್ವಚ್ಛತೆಗೂ ಯಾವುದೇ ಕಾರಣಕ್ಕೂ ಮಾನವರನ್ನು ಬಳಸುವಂತಿಲ್ಲ. ಕಡ್ಡಾಯವಾಗಿ ಮ್ಯಾನ್ ಹೋಲ್ ಗಳನ್ನು ಸಕ್ಕಿಂಗ್ ಯಂತ್ರದ ಮೂಲಕವೇ ಶುಚಿ ಮಾಡಬೇಕು ಎಂಬ ಕಟ್ಟುನಿಟ್ಟಿನ ಕಾನೂನುಗಳಿವೆ. ಆದರೂ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗಳಿಗೆ ಇಳಿಸುತ್ತಿರುವ ಘಟನೆಗಳು ನಿರಾತಂಕವಾಗಿ ನಡೆಯುತ್ತಿದ್ದು, ಅದರ ಮುಂದುವರಿದ ಭಾಗವೆಂಬಂತೆ ಇಂದು ಕೂಡ ಕಾರ್ಮಿಕನೋರ್ವನನ್ನು ಗುತ್ತಿಗೆದಾರರು ಮ್ಯಾನ್ ಹೋಲ್ ಗೆ ಇಳಿಸಿ ಶುಚಿ ಮಾಡಿಸುತ್ತಿರುವ ಗಂಭೀರ ಪ್ರಕರಣ ನಡೆದಿದೆ
ಮ್ಯಾನ್ ಹೋಲ್ ಗಳಿಗೆ ಇಳಿಯುವ ಕಾರ್ಮಿಕರಿಗೆ ಇದಾವುದರ ಬಗ್ಗೆ ಅರಿವು ಇರುವುದಿಲ್ಲ. ತಮ್ಮ ಜೀವನ ನಿರ್ವಾಹಣೆಗಾಗಿ ಅಪಾಯದ ಅರಿವಿಲ್ಲದೇ ಈ ರೀತಿ ಮ್ಯಾನ್ ಹೋಲ್ ಗೆ ಇಳಿದು ಕೆಲಸ ಮಾಡುತ್ತಾರೆ. ಮ್ಯಾನ್ ಹೋಲ್ ಗೆ ಇಳಿದು ಕಾರ್ಮಿಕರು ಮೃತಪಟ್ಟ ಪ್ರಕರಣಗಳ ಹಲವಾರು ನಡೆದಿದೆ. (1993 ರಲ್ಲಿ ಜಾರಿಗೆ ಬಂದಂತಹ ಸಪಾಯಿ ಕರ್ಮಚಾರಿಗಳ ಬಳಕೆ ಮತ್ತು ಶುಷ್ಕ ಶೌಚಗುಂಡಿಗಳ ನಿಷೇಧ ಕಾಯ್ದೆಯಡಿ ಮಾನವರು ಶೌಚಗುಂಡಿಗೆ ಇಳಿದು ಸ್ವಚ್ಛಗೊಳಿಸುವಂತಿಲ್ಲ. ಮತ್ತು ಯಾರಿಗೂ ಪ್ರಚೋದನೆ ನೀಡುವಂತಿಲ್ಲ. ಒಂದು ವೇಳೆ ಅಂತಹ ಕೆಲಸವನ್ನು ಮಾಡಿದರೆ ಅಥವ ಮಾಡಿಸಿದರೆ ಅಂತಹ ವ್ಯಕ್ತಿಗೆ 6 ತಿಂಗಳಿಂದ ಐದು ವರ್ಷದ ತನಕ ಕಠಿಣ ಶಿಕ್ಷೆ ಮತ್ತು ದಂಡ ವಿಸಬಹುದು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ.) ಹಾಗಿದ್ದರೂ ಮಂಗಳೂರು ನಗರದ ಹೃದಯ ಭಾಗದಲ್ಲಿ ಶೌಚಾಲಯದ ಶೌಚಗುಂಡಿಗೆ ಇಂದು ಇಳಿದು ವ್ಯಕ್ತಿಯೊಬ್ಬರು ಸ್ವಚ್ಛಗೊಳಿಸಿರುವ ಈ ಘಟನೆಯ ಬಗ್ಗೆ ಮನಪಾ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ನೋಡಬೇಕಾಗಿದೆ.