ಕನ್ನಡ ವಾರ್ತೆಗಳು

ಬೀದಿನಾಯಿ,ಹುಚ್ಚುನಾಯಿಗಳ ಹಾವಳಿ ಹಿನ್ನೆಲೆ: ಸಾಕುನಾಯಿಗಳಿಗೆ ಲೈಸೆನ್ಸ್ ಕಡ್ಡಾಯ

Pinterest LinkedIn Tumblr

DOG_0

ಮಂಗಳೂರು, ಜ.28 : ನಗರದ ಕೆಲವು ಒಳ ರಸ್ತೆ ಮತ್ತು ಮುಖ್ಯ ರಾಸ್ತೆಗಳಲ್ಲಿ ಬೀದಿನಾಯಿ ಕಾಟ ಹೆಚ್ಚಿದ್ದರೆ, ಕತ್ತಲಾಗುತ್ತಲೇ ಸಾಕು ನಾಯಿಗಳ ಹಾವಳಿ ಸಾರ್ವಜನಿಕರ ನಿದ್ದೆಗೆಡಿಸುವಂತಿರುತ್ತದೆ. ರಸ್ತೆಯಲ್ಲಿ ಅಡ್ಡ ಬರುವ ನಾಯಿಗಳಿಂದ ವಾಹನಿಗರಿಗೆ ಅಪಾಯ ಸಂಭವಿಸುವುದೂ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಿಡಿಯುವ ಕೆಲಸ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡಿ ದ್ದರೂ, ಬೀದಿನಾಯಿಗಳ ಸಂಖ್ಯೆ- ಕಾಟಕ್ಕೇನೂ ಕೊರತೆಯಾಗಿಲ್ಲ.

ಬೀದಿನಾಯಿಗಳಿಂದ ವೃದ್ಧರು ಮತ್ತು ಶಾಲಾ ಮಕ್ಕಳಿಗೆ ಶಾಲೆಗೆ ಹೋಗುವುದೇ ಕಷ್ಟವಾಗಿದೆ. ಮಕ್ಕಳನ್ನು ಅಟ್ಟಿಕೊಂಡು ಬರುವ, ಕಚ್ಚುವ ಬೀದಿನಾಯಿಗಳು ಹಾಗೂ ಸಾಕು ನಾಯಿಗಳೂ ಇವೆ. ಕಾರಣ, ಮಂಗಳೂರು ನಗರ ಪಾಲಿಕೆಯು ಈಗ ಸಾಕುನಾಯಿಗಳಿಗೆ ಲೈಸೆನ್ಸ್ ಕಡ್ಡಾಯ ಗೊಳಿಸ ಬೇಕೆನ್ನುವ ಪ್ರಸ್ತಾವದ ಬಗ್ಗೆ ಚಿಂತಿಸಿದೆ.

ಆದಾಗ್ಯೂ, ಸಾಕುನಾಯಿಗಳಿಗೆ ಲೈಸೆನ್ಸ್ ಕಡ್ಡಾಯಗೊಳಿಸುವ ಮುನ್ನ ಪ್ರಸ್ತಾವದ ಬಗ್ಗೆ ಪಾಲಿಕೆ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆ ನಡೆಯಬೇಕೆಂದು ಚುನಾಯಿತ ಪ್ರತಿನಿಧಿಗಳು ಹೇಳಿದ್ದಾರೆ. ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಮತ್ತು ಹುಚ್ಚುನಾಯಿಗಳ ಹಾವಳಿ ಕಡಿಮೆ ಮಾಡುವ ಉದ್ದೇಶದಿಂದಮ ಪಾಲಿಕೆ ಸಾಕುನಾಯಿಗಳಿಗೆ ಲೈಸೆನ್ಸ್ ನಿಯಮ ಪ್ರಸ್ತಾವಿಸಿದೆ. ಈ ಪ್ರಸ್ತಾವದ ಪ್ರಕಾರ ಮನೆ ಮಾಲಕರು ತಮ್ಮ ಸಾಕು ನಾಯಿಗಳಿಗೆ ಲೈಸೆನ್ಸ್ ಹೊಂದಬೇಕು ಮತ್ತು ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಬೇಕಿದೆ.

ಇದೇ ವೇಳೆ ನಗರದ ಎಲ್ಲ 60 ವಾರ್ಡುಗಳಲ್ಲಿ ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಬಗ್ಗೆಯೂ ಪಾಲಿಕೆ ಪ್ರಸ್ತಾವಿಸಿದೆ. ಇದರ ವೆಚ್ಚವನ್ನು ನಾಯಿ ಮಾಲಕರೇ ಪಾವತಿಸಬೇಕು. 2001ರ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿಯ ಪ್ರಾಣಿ ಹುಟ್ಟು ನಿಯಂತ್ರಣ ನಿಯಮದಂತೆ ಏಳು ಮಂದಿ ಒಳಗೊಂಡ ನಾಯಿ ಕ್ಷೇಮಾಭಿವೃದ್ಧಿ ಸಮಿತಿಯೊಂದು ರಚಿಸಲು ನಿರ್ಧರಿಸಲಾಗಿದೆ. ಆದರೆ ಈ ಎರಡೂ ಪ್ರಸ್ತಾವನ್ನು ಪಾಲಿಕೆ ಪರಿಷತ್ತು ಸದ್ಯ ತಡೆ ಹಿಡಿದಿದೆ.

ಪಾಲಿಕೆ ಆಯುಕ್ತರು ನಾಯಿ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರಬೇಕಾಗುತ್ತದೆ. ಉಳಿದಂತೆ ಈ ಸಮಿತಿಯಲ್ಲಿ ಸದಸ್ಯರಾಗಿ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ, ಒಬ್ಬ ಸರ್ಕಾರಿ ಪಶುವೈದ್ಯ, ಸರಕಾರೇತರ ಸಂಸ್ಥೆಯ ಒಬ್ಬ ಪ್ರತಿನಿಧಿ, ನಿಗಮದ ಇಬ್ಬರು ಆರೋಗ್ಯಾಧಕಾರಿ, ಇಬ್ಬರು ಕಾರ್ಪೊರೇಟರುಗಳು ಮತ್ತು ಪ್ರಾಣಿ ಹುಟ್ಟು ನಿಯಂತ್ರಣ ಕಾರ್ಯಕ್ರಮಕ್ಕಾಗಿ ನಿಯುಕ್ತಿಗೊಳಿಸಲಾದ ಗುತ್ತಿಗೆ ಪ್ರತಿನಿಧಿ ಕಾರ್ಯನಿರ್ವಹಿಸಬೇಕಿದೆ.

ಹಲವಾರು ಸಾಕುನಾಯಿಗಳು ರಾತ್ರಿ ವೇಳೆ ಬೀದಿಗಿಳಿಯುತ್ತಿದ್ದು, ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವವರು ಹಾಗೂ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಆದ್ದರಿಂದ ನಗರದಲ್ಲಿ ಈಗ ನಾಯಿ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷ್ಷಣ ಮತ್ತು ಸಾಮಾಜಿಕ ನ್ಯಾಯ ವಿಭಾಗದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಿರಿಯಾನ್ ಹೇಳಿದ್ದಾರೆ.

ನಗರದಲ್ಲಿ ಬೀದಿನಾಯಿಗಳ ಜೊತೆಗೆ ಸಾಕುನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನಗರ ಪಾಲಿಕೆಯ ಪ್ರಸಕ್ತ ಪ್ರಸ್ತಾವ ಸ್ವಾಗತಾರ್ಹವೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Write A Comment