ಮಂಗಳೂರು : ಸರಕಾರಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ವರ್ಷಕ್ಕೆ 15 ಮಿಲಿಯನ್ ಬಾಲ್ಯವಿವಾಹಗಳು ನಡೆಯುತ್ತಿದ್ದು, ಪ್ರತಿ ನಿಮಿಷಕ್ಕೆ 28 ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿಲ್ಲ. ಇದು ದ.ಕ.ಜಿಲ್ಲೆಯವರು ಪ್ರಜ್ಞಾವಂತರಾಗಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ನ್ಯಾಯಾಂಗ ಇಲಾಖೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ರವಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ದ.ಕ.ಜಿಲ್ಲಾ ನ್ಯಾಯಾಧೀಶರಿಗಾಗಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅನುಷ್ಠಾನದ ಕುರಿತ ಒಂದು ದಿನದ ಸಂವೇದನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹದಿನೆಂಟು ವರ್ಷ ತುಂಬದ ಅಪ್ರಾಪ್ತ ವಯಸ್ಸಿನ ಯುವತಿ ಹಾಗೂ 24 ವರ್ಷ ತುಂಬದ ಯುವಕರು ವಿವಾಹವಾಗುವುದನ್ನು ಬಾಲ್ಯ ವಿವಾಹ ಎನ್ನುತ್ತೇವೆ. ಈ ವಯಸ್ಸಿನಲ್ಲಿ ತಿಳುವಳಿಕೆಯ ಕೊರತೆ ಇರುವುದರಿಂದ ವಿವಾಹ ಸಂಬಂಧಗಳ ಅರಿವಿಲ್ಲದೇ ಜೀವನ ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೇಳಿದ ಅವರು, ದ.ಕ. ಜಿಲ್ಲೆಯಲ್ಲಿ ಕೆಲವೆಡೆಗಳನ್ನು ನಡೆಯಬಹುದಾಗಿದ್ದ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸಫಲರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸಹಿತಾ ಹಿರಿಯ ನ್ಯಾಯಾಧೀಶ ಶಂಕರ್ ಭಟ್, ಬೈಂದೂರು ಶಂಕರ್ ಭಟ್, ಶಿವ ಕುಮಾರ್ ಮತ್ತಿತರರು ಮಾತನಾಡಿ ಈ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡಿದರು.