ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ತಾಲೂಕು ವಿಭಾಗ ಮಟ್ಟದ ಪಥಸಂಚಲನ ರವಿವಾರ ನಗರದಲ್ಲಿ ನಡೆಯಿತು. 1500ಕ್ಕೂ ಹೆಚ್ಚು ಸ್ವಯಂಸೇವಕ ಈ ಪಥ ಸಂಚಲದಲ್ಲಿ ಪಾಲ್ಗೊಂಡರು.
ಇಂದು ಮುಂಜಾನೆ ಮಂಗಳೂರಿನ ಕೇಂದ್ರ ಮೈದಾನದಿಂದ ಆರಂಭಗೊಂಡ ಪಥಸಂಚಲನ ಸ್ಟೇಟ್ ಬ್ಯಾಂಕ್, ಬಂದರ್, ರಥಬೀದಿ ( ಕಾರ್ಸ್ಟ್ರೀಟ್) ಮೂಲಕ ಸಾಗಿ ಹಂಪನ್ಕಟ್ಟೆ ಆಗಿ ಮತ್ತೆ ಕೇಂದ್ರ ಮೈದಾನಕ್ಕೆ ಆಗಮಿಸಿತು.
ಈ ಪಥಸಂಚಲನ ಈ ಹಿಂದೆ ಅಂದರೆ ವಿಜಯದಶಮಿ ಸಂದರ್ಭವೇ ನಡೆಯಬೇಕಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿಪರಿತ ಮಳೆ ಸುರಿದ ಕಾರಣ ಮುಂದೂಡಲಾಗಿತ್ತು ಎಂದು ಸಂಘದ ಪ್ರಮುಖರೊಬ್ಬರು ತಿಳಿಸಿದ್ದಾರೆ.
ಇಂದಿನ ಪಥಸಂಚಲನದಲ್ಲಿ ಜಿಲ್ಲಾ ಸಂಘ ಚಾಲಕ್ ಡಾ. ಸತೀಶ್ ರಾವ್, ದಕ್ಷಿಣ ವಿಭಾಗದ ಸಂಘಚಾಲಕ್ ಡಾ. ವಾಮನ್ ಶೆಣೈ, ಆರ್.ಎಸ್.ಎಸ್ನ ಜಿಲ್ಲಾ ಪ್ರಮುಖ್ ಪಿ.ಎಸ್.ಪ್ರಕಾಶ್, ವಿಎಚ್ಪಿ ಮುಖಂಡ ಜಗದೀಶ್ ಶೇಣವ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಪಾಲ್ಗೊಂಡಿದ್ದರು.