ಉಡುಪಿ: ಅತೀ ವೇಗವಾಗಿ ಕುಂದಾಪುರದ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿನಿಂದ ಹಾದು ಎದುರು ಬರುತ್ತಿದ್ದ ಲಾರಿ ಹಾಗೂ ಬೈಕಿಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ತಾಲೂಕಿನ ಕೋಟ ಸಮೀಪದ ಮಣೂರು ಕರಿಕಲ್ ಕಟ್ಟೆ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸಾಸ್ತಾನ ಯಡಬೆಟ್ಟು ನಿವಾಸಿ ರಾಘವೇಂದ್ರ ಭಟ್(41) ಎನ್ನುವವರೇ ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ. ಬೈಕ್ ಹಿಂಬದಿಯಲ್ಲಿದ್ದ ರಾಘವೆಂದ್ರ ಅವರ ಸಹೋದರಿ ವಾಣಿ ಅವರಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಅಪಘಾತಕ್ಕೆ ಕಾರಣರಾದ ಕೋಟೇಶ್ವರ ಮೂಲದ ಕಾರು ಚಾಲಕರಾದ ನವೀನ್ ಹಾಗೂ ಮಂಜುನಾಥ್ ಎನ್ನುವವರಿಗೂ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದೆ.
ಘಟನೆ ವಿವರ: ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗದಿಂದ ಸಾಗುತ್ತಿದ್ದ ಕಾರು ಮಣೂರು ಸಮೀಪ ಕರಿಕಲ್ಕಟ್ಟೆ ಎಂಬಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿಯ ಒಂದು ಕಡೆಯಿಂದ ಡಿವೈಡರ್ ಏರಿ ಎದುರು ಬದಿಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ತದನಂತರ ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿ ಪರಿಣಾಮ ಬೈಕ್ ಸವಾರ ಕಾರಿನ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಹಿಂದಿಯಲ್ಲಿ ಕುಳಿತಿದ್ದ ಅವರ ಸೋದರಿ ವಾಣಿ ಅವರಿಗೂ ಗಂಭೀರ ಗಾಯವಾಗಿದೆ. ಕಾರನ್ನು ಅತೀ ವೇಗದಲ್ಲಿ ಚಲಿಸಿದ ನವೀನ್ ಮತ್ತು ಸಹ ಸವಾರರಾಗಿದ್ದ ಮಂಜುನಾಥ ಎನ್ನುವಾತನಿಗೂ ಗಾಯಗಳಾಗಿದೆ.
ಅಪಘಾತದ ತೀವ್ರತೆಗೆ ಬೈಕ್ ಛಿದ್ರವಾಗಿದ್ದು ಕರಿನ ಮುಂಭಾಗೂ ನಜ್ಜುಗುಜ್ಜಾಗಿತ್ತು. ಕೆಲ ಕಾಲ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಯಾಗಿದ್ದು ಕೋಟ ಪೊಲೀಸರು ಸಂಚಾರ ಮಾರ್ಗ ಬದಲಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.
ಉಡುಪಿ ಎಸ್ಪಿ ಭೇಟಿ
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬ್ರಹ್ಮಾವರ ಸಿಪಿಐ ಅರುಣ್ ನಾಯಕ್ ಇದ್ದರು. ಹೆದ್ದಾರಿ ಅವ್ಯವಸ್ಥೆ ಬಗ್ಗೆ ಇದೇ ವೇಳೆ ಸಾರ್ವಜನಿಕರು ಎಸ್ಪಿ ಅವರ ಬಳಿ ತಮ್ಮ ಸಮಸ್ಯೆ ಹೇಳಿದರು.
ಸದ್ಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ, ವರದಿ- ಯೋಗೀಶ್ ಕುಂಭಾಸಿ