ಕುಂದಾಪುರ: ಕುಂದಾಪುರ ತಾಲೂಕಿನ ಮರವಂತೆಯ ಬೀಚ್ ನಲ್ಲಿ 2013ರ ಸೆ. 19ರಂದು ರಾತ್ರಿ ತನ್ನ ಅತ್ತಿಗೆ ಮಂಗಳಾ ಖಾರ್ವಿಯನ್ನು ಕೊಲೆ ಮಾಡಿ ಆಕೆಯ ಶವವನ್ನು ಸಮುದ್ರಕ್ಕೆ ಎಸೆದು ಸಾಕ್ಷ ನಾಶ ಮಾಡಿದ ಆರೋಪಿ ಗಂಗೊಳ್ಳಿಯ ಸತೀಶ ಖಾರ್ವಿ (30) ಖುಲಾಸೆಗೊಂಡಿದ್ದಾರೆ.
(ಮಂಗಳಾ ಖಾರ್ವಿ )
(ಸತೀಶ)
ಮಕ್ಕಳಿರದ ಮಂಗಳಾ ಖಾರ್ವಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ಸತೀಶನಿಗೆ ಮದುವೆ ನಿಶ್ಚಯವಾಗಿದ್ದು, ಅದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿ ಸಿದ್ದರಿಂದ ಆರೋಪಿಯು ಉಪಾಯವಾಗಿ ಆಕೆಯನ್ನು ಉಡುಪಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿಸಿ ಅನಂತರ ಮರವಂತೆ ಬೀಚಿಗೆ ವಿಹಾರಕ್ಕೆ ಕರೆದೊಯ್ದು ಉಪಾಯವಾಗಿ ಕೊಲೆ ಮಾಡಿದ್ದನೆಂದು ಆರೋಪಿಸಲಾಗಿತ್ತು. ಅನಂತರ ಮರವಂತೆ ಸೀಲ್ಯಾಂಡ್ ಹೊಟೇಲ್ ಬಳಿ ಸಮುದ್ರ ತೀರದಲ್ಲಿ ಮಂಗಳಾ ಖಾರ್ವಿ ಅವರ ಶವ ಕಂಡು ಬಂದಿತ್ತು.
ಆರೋಪಿಯ ಮೊಬೈಲ್ ಕರೆ ಆಧಾರದಲ್ಲಿ ಹಾಗೂ ಮೊಬೈಲ್ ಲೊಕೇಶನ್‌ನಿಂದಾಗಿ ಪ್ರಕರಣ ಪತ್ತೆಯಾಗಿತ್ತು. ನ್ಯಾಯಾಲಯದಲ್ಲಿ ೧೭ ಜನ ಸಾಕ್ಷಿದಾರರ ವಿಚಾರಣೆ ನಡೆದಿತ್ತು. ಪ್ರಕರಣದ ಕೂಲಂಕುಷ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ರಾಜಶೇಖರ್ ವಿ. ಪಾಟೀಲ್ ಆರೋಪಿಯನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ವಾದಿಸಿದ್ದರು.