ಪುತ್ತೂರು, ಫೆ.08: ಕಳೆದ ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ತೆಂಕಿಲ ನಿವಾಸಿ ಸೌಮ್ಯಾಳ (25 ) ಕಳೇಬರ, ಆಕೆಯ ಮನೆಗೆ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದೆ.
ಸೆಪ್ಟೆಂಬರ್ 18 ರಂದು ಕೋಡಿಜಾಲಿನಲ್ಲಿರುವ ತನ್ನ ಅಜ್ಜಿ ಮನೆಗೆಂದು ಹೊರಟಿದ್ದ ಸೌಮ್ಯಾ ನಂತರ ನಾಪತ್ತೆಯಾಗಿದ್ದಳು. ಆಕೆ ಅಜ್ಜಿ ಮನೆಯಿಂದ ತನ್ನ ಮನೆಗೆ ಹಿಂದಿರುಗಿದ್ದು ಬಳಿಕ ನಾಪತ್ತೆಯಾಗಿದ್ದಳು ಎನ್ನಲಾಗಿದೆ.
ನಿನ್ನೆ ಹತ್ತಿರದ ಗುಡ್ಡ ಪ್ರದೇಶದಲ್ಲಿ ಸ್ಥಳೀಯ ಹೆಂಗಸರು ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ, ಮರಮೊಂದರ ಕೆಳಗಡೆ ವ್ಯಕ್ತಿಯ ತಲೆಬುರುಡೆ ಮತ್ತು ಎಲುಬುಗಳು ಕಂಡು ಬಂದಿದ್ದು, ಇದನ್ನು ಕಂಡು ಭಯಭೀತರಾದ ಹೆಂಗಸರು ಮನೆಯವರಿಗೆ ಮಾಹಿತಿ ಮುಟ್ಟಿಸಿದರು. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಗಿದೆ.
ತಲೆಬುರುಡೆ ಮತ್ತು ಎಲುಬುಗಳು ಇದ್ದ ಜಾಗದಲ್ಲಿ ಬಟ್ಟೆಬರೆಗಳು, ಸರ ಪತ್ತೆಯಾಗಿದೆ. ಇದು ನಾಪತ್ತೆಯಾಗಿದ್ದ ಯುವತಿ ಸೌಮ್ಯಾಳದ್ದೆಂದು ಗುರುತು ಹಚ್ಚಲಾಗಿದೆ. ಕಳೇಬರ ಪತ್ತೆಯಾದ ಸ್ಥಳದ ಮರವೊಂದರಲ್ಲಿ ನೈಲಾನ್ ಹಗ್ಗ ಕಂಡು ಬಂದಿದೆ.
ಪಿಯುಸಿ ಮುಗಿಸಿದ್ದ ಈಕೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ನರ ದೌರ್ಬಲ್ಯವಿದ್ದು, ಔಷಧಿ ಪಡೆಯುತ್ತಿದ್ದಳು ಎನ್ನಲಾಗಿದೆ.
ಸೌಮ್ಯಾ ನಾಪತ್ತೆ ಬಳಿಕ ಈ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ದಲಿತ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಶವ ಪತ್ತೆ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಹಾಗೂ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೌಮ್ಯಾಳು
ಮಾನಸಿಕ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.