ಕನ್ನಡ ವಾರ್ತೆಗಳು

ಬೆಂಗಳೂರಿನಲ್ಲಿ ನಡೆಯಲಿದೆ ಕರಾವಳಿ ಉತ್ಸವ: `ನಮ್ಮೂರಹಬ್ಬ-2016’ಕ್ಕೆ ನಗರ ಸಜ್ಜು

Pinterest LinkedIn Tumblr

ಬೆಂಗಳೂರು: ನಮ್ಮೂರ ಹಬ್ಬ ತಂಡವು, ಅಭಿನಂದನಾ ಟ್ರಸ್ಟಿನ ಆಶ್ರಯದಲ್ಲಿ ಮೂರನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ “ನಮ್ಮೂರ ಹಬ್ಬ – 2016” ರನ್ನು ಫೆಬ್ರವರಿ 13ನೇ ಶನಿವಾರ ಹಾಗು ಫೆಬ್ರವರಿ 14ನೇ ಭಾನುವಾರ ಬೆಳಿಗ್ಗೆ 10:30 ರಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ಹಮ್ಮಿಳ್ಳಲಾಗಿದೆ. ಇದು ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.

Nammoora Habba_Bangalore_Coastal (4) Nammoora Habba_Bangalore_Coastal (3) Nammoora Habba_Bangalore_Coastal (5) Nammoora Habba_Bangalore_Coastal (2)

ಕಾರ್ಯಕ್ರಮದ ಉದ್ಘಾಟನೆ:
ಶನಿವಾರ ಬೆಳಿಗ್ಗೆ 10:30ಕ್ಕೆ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದ್ದು ಆ ಸಂದರ್ಭದಲ್ಲಿ ನಮ್ಮೊಡನೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪುಂಡಲಿಕ ಹಾಲಂಬಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸ್ಥಳೀಯ ಶಾಸಕರಾದ ಬಿ. ಏನ್. ವಿಜಯಕುಮಾರ್ ಹಾಗು ಇನ್ನಿತರರು ಉಪಸ್ಥಿತರಿರಲಿದ್ದಾರೆ. ಸಂಜೆ ಗಣ್ಯರ ಸಮ್ಮುಖದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ನ ಪ್ರತಿಷ್ಠಿತ ಈ ವರ್ಷದ “ಕಿರೀಟ” ಪ್ರಶಸ್ತಿಯನ್ನು ಸಂಘ ಸಂಸ್ಥೆಗಳ ವಿಭಾಗದಲ್ಲಿ ಹೋಟೆಲ್ ಉದ್ಯಮದವರ ಶ್ರೆಯೋಭಿವೃದ್ದಿಗಾಗಿ ಕಳೆದ ನಲವತ್ತೊಂಭತ್ತು ವರ್ಷಗಳಿಂದ ದುಡಿಯುತ್ತಿರುವ “ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ”ಕ್ಕೆ ಹಾಗು ವೈಯಕ್ತಿಕ ವಿಭಾಗದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಡಾ| ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ನೀಡಲಿದ್ದೇವೆ. ನಮ್ಮೂರ ಹಬ್ಬದ ಎರಡು ದಿನದ ಸಂಜೆಯ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಕೇಂದ್ರ ಸಚಿವರಾದ ಶ್ರೀ ಸದಾನಂದ ಗೌಡ, ಆರೋಗ್ಯ ಸಚಿವರಾದ ಯು. ಟಿ. ಖಾದರ್, ಮಾಗ್ಸಸೆ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್ ಹಂದೆ, ಜನಪ್ರಿಯ ಸಾಹಿತಿ ಜಯಂತ ಕಾಯ್ಕಿಣಿ ಹಾಗು ಇನ್ನಿತರರು ಜೊತೆಯಿರಲಿದ್ದಾರೆ.

Nammoora Habba_Bangalore_Coastal (6) Nammoora Habba_Bangalore_Coastal (1)

ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರ:
ಎಂದಿನಂತೆ ಈ ಬಾರಿಯೂ ನಮ್ಮೂರ ಹಬ್ಬ ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಮುಖ್ಯವಾಗಿ ಕಿಶೋರ್ ಕಾಡಬೆಟ್ಟು ನೇತೃತ್ವದ ಸುಪ್ರಸಿದ್ಧ ಹುಲಿವೇಷ ತಂಡದಿಂದ ವಿಶೇಷ ಹುಲಿವೇಷ ಕುಣಿತ, ಕರಾವಳಿಯ ಜನಪದ ವಾದ್ಯಗಳ ಮಹಾಮೇಳ, ನಾಡಿನ ಜನಪ್ರಿಯ ಗಾಯಕರಾದ ಸುಪ್ರಿಯಾ ರಘುನಂದನ್, ವಿನಯ್ ನಾಡಿಗ್, ಅಜಯ್ ವಾರಿಯರ್, ಚೈತ್ರಾ, ದೀಪಕ್ ದೊಡ್ಡೇರ, ಗಗನ್ ಗಾಂವ್ಕರ್, ಅಭಿನವ್ ಭಟ್ ಹಾಗು ಸಾನ್ವಿ ಶೆಟ್ಟಿ ಆಯ್ದ ಜನಪ್ರಿಯ ಭಾವಗೀತೆ ಹಾಗು ಸಿನೆಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿದ್ದಾರೆ. “ಕರಾವಳಿ ವೈಭವ” ಎನ್ನುವ ವಿಶೇಷ ನೃತ್ಯ ರೂಪಕ, ಕರಾವಳಿ ಉಡುಗೆ ತೊಡುಗೆಗಳ ಫ್ಯಾಶನ್ ಶೋ, ಸತೀಶ್ ಪೈ ನೇತೃತ್ವದ “ರೂಪಕಲಾ ಕುಂದಾಪುರ” ತಂಡದಿಂದ “ಮೂರು ಮುತ್ತು” ನಾಟಕದ ಆಯ್ದ ದೃಶ್ಯಗಳ ಅಭಿನಯ, “ಅಗ್ನಿ ಫ್ಯೂಷನ್ ಬ್ಯಾಂಡ್” ತಂಡದಿಂದ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್’ಬಂದಿ, ಕರಾವಳಿಯ ಸಾಂಸ್ಕೃತಿಕ ಸಿರಿಯ ದೊಂದಿ ಬೆಳಕಿನ ಮೆರವಣಿಗೆ, ಅಂತರರಾಷ್ಟ್ರೀಯ ಚಿತ್ರಕಲಾವಿದರಾದ ವಿಲಾಸ್ ನಾಯಕ್ ಅವರಿಂದ ಪ್ರದರ್ಶನ, ಯಕ್ಷಗಾನದ ವಿಭಿನ್ನ ವೇಷಗಳ ಯಕ್ಷ ವೈಭವ, ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಈ ಬಾರಿಯ ನಮ್ಮೂರ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ. ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಯುವಕವಿ ಗೋಷ್ಠಿ, ಕರಾವಳಿ ಅಡುಗೆ ಪ್ರಾತ್ಯಕ್ಷಿಕೆ ಹಾಗು ವಿಚಾರ ವಿನಿಮಯಗಳು ನಡೆಯಲಿವೆ.

ಇದೆಲ್ಲದರ ಜೊತೆಗೆ ಶನಿವಾರ ಮಕ್ಕಳಿಗೆ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆ ಹಾಗು ಭಾನುವಾರ ಬೆಳಿಗ್ಗೆ ಹತ್ತರಿಂದ ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಲಗೋರಿ, ಹಗ್ಗ ಜಗ್ಗಾಟ ಹಾಗು ಇತರೇ ಕರಾವಳಿಯ ಗ್ರಾಮೀಣ ಕ್ರೀಡೆಗಳು ಹಾಗು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇರಲಿದೆ.

ಕರಾವಳಿ ಖಾದ್ಯಗಳು
ಈ ಎಲ್ಲ ಮನರಂಜನೆಯ ಜೊತೆಗೆ ನಮ್ಮೂರ ಹಬ್ಬದಲ್ಲಿ ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ನಮ್ಮೂರ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ಹಾಗು ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳು ಕೂಡ ಲಭ್ಯವಿರುತ್ತದೆ.

ಕಳೆದ ಬಾರಿಯ ನಮ್ಮೂರ ಹಬ್ಬಕ್ಕೆ ನಲವತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು, ಹಿಂದಿನ ಬಾರಿಯ ಹಬ್ಬದ ಯಶಸ್ಸು ಈ ಬಾರಿ ನಮ್ಮ ನಿರೀಕ್ಷೆಯನ್ನು ಮತ್ತಷ್ಟು ಹಿರಿದಾಗಿಸಿದೆ.

Write A Comment