ಕನ್ನಡ ವಾರ್ತೆಗಳು

ಹೆಲ್ಮೆಟ್ ಕಡ್ಡಾಯ : ಪೊಲೀಸ್ ಇಲಾಖೆಗೂ ತಟ್ಟಿದ್ದ ಬಿಸಿ – ಎಎಸ್ಸೈಗೆ ದಂಡ!

Pinterest LinkedIn Tumblr

helmate_police_fine

ಮಂಗಳೂರು, ಫೆ. 11: ಕಾನೂನು ರಕ್ಷಣೆಗೆ ನಿಂತ ಪೊಲೀಸರೇ ಕಾನೂನು ಉಲ್ಲಂಘನೆ ಮಾಡಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಇದೀಗ ತಮ್ಮ ತಪ್ಪಿಗೆ ಎಎಸ್ಸೈಯೊಬ್ಬರು ದಂಡ ತೆತ್ತಿದ್ದಾರೆ.

ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೊಂಡ ಬಳಿಕ ಹಲವಾರು ಕುತೂಹಲಕಾರಿ ಘಟನೆಗಳು ಸಂಭವಿಸುತ್ತಿರುವುದರ ಬಗ್ಗೆ ನಾವು ದಿನ ನಿತ್ಯ ಓದುತ್ತಿದ್ದೇವೆ. ಇದೀಗ ಮಂಗಳೂರಿನಲ್ಲಿ ಇನ್ನೊಂದು ಕುತೂಹಲಕಾರಿ ಪ್ರಕರಣ ನಡೆದಿದೆ.

ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೊಂಡಿದ್ದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಎಎಸ್ಸೈಯೊಬ್ಬರು ಹೆಲ್ಮೆಟ್ ಧರಿಸದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ದೃಶ್ಯವು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿ ಮೇಲೆ ದಂಡ ವಿಧಿಸಿದ್ದಾರೆ.

ಬುಧವಾರ ನಗರದ ಕಂಕನಾಡಿ ಬಳಿ ಎಎಸ್ಸೈ ಶ್ರೀಧರ್ ಎಂಬವರೊಂದಿಗೆ ಮಹಿಳಾ ಸಿಬ್ಬಂದಿಯೊಬ್ಬರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಚಿತ್ರವನ್ನು ಯಾರೋ ಸೆರೆ ಹಿಡಿದು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಬೈಕ್ ಚಲಾಯಿಸುತ್ತಿದ್ದ ಎಎಸ್ಸೈ ಶ್ರೀಧರ್‌ರನ್ನು ಗುರುತಿಸಿ ಅವರ ಮೇಲೆ ಸ್ವಯಂ ಪ್ರೇರಿತವಾಗಿ 100 ರೂ. ದಂಡ ವಿಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ರೀತಿ ಕಾನೂನು ಪಾಲಿಸುವ ಮೂಲಕ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂಬ ತತ್ವವನ್ನು ನಿರೂಪಿಸಿದ್ದಾರೆ

Write A Comment